ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸಾಧಕರ ದಿನ- ಬದಲಾವಣೆಯ ಪ್ರಜ್ಞೆಯಿಂದ ಸಾಧನೆಯ ಮುನ್ನಡೆ: ನಿಶ್ಚಿತಾ ಬರ್ಕೆ

0

ಉಜಿರೆ: ಬದಲಾವಣೆಯ ಕುರಿತು ನಿರಂತರವಾಗಿ ಅಲೋಚಿಸುವ ಪ್ರಜ್ಞೆಗೆ ಪೂರಕವಾಗಿ ದೊರಕುವ ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ವಿಭಿನ್ನ ಸಾಧನೆಯ ಮುನ್ನಡೆ ಕಂಡುಕೊಳ್ಳಬೇಕು ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ)ಯ ಹಿರಿಯ ವಿಜ್ಞಾನಿ ನಿಶ್ಚಿತಾ ಬರ್ಕೆ ಅಭಿಪ್ರಾಯಪಟ್ಟರು.

ಉಜಿರೆಯ ಎಸ್‌ಡಿಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಧಕರ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಸಾಧನೆಯ ಗಮ್ಯ ತಲುಪಿಕೊಳ್ಳುವ ಬದ್ಧತೆಯ ಜೊತೆಗೆ ಇರಬೇಕು. ಬದುಕಿನ ಯಾವ ಹಂತದಲ್ಲಿ ಸಾಧನೆಯ ತಿರುವು ಸಿಗುತ್ತದೆ ಎಂಬುದರ ಸ್ಪಷ್ಟತೆ ಇರುವುದಿಲ್ಲ.ಆದರೆ, ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಕುರಿತ ಸ್ಪಷ್ಟ ಆಲೋಚನೆಯು ಭವಿಷ್ಯದ ಹಾದಿಯನ್ನು ನಿಖರಗೊಳಿಸುತ್ತದೆ.

ಉಳಿದವರೊಂದಿಗೆ ಸ್ಪರ್ಧಿಸುವ ಮನಃಸ್ಥಿತಿಯ ಬದಲು ವ್ಯಕ್ತಿಗತ ಮಿತಿಗಳನ್ನು ಮೀರುವ ಮಹತ್ವಾಕಾಂಕ್ಷೆಯು ಹೊಸ ಸಾಧನೆಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು. ಕಾಲೇಜಿನಲ್ಲಿ ಓದುವ ಕಾಲಕ್ಕೇ ಅಧ್ಯಯನದ ಉದ್ದೇಶ ಮತ್ತು ಭವಿಷ್ಯದ ವೃತ್ತಿಪರ ಕನಸುಗಳನ್ನು ಇರಿಸಿಕೊಳ್ಳಬೇಕು.ಈ ಕನಸುಗಳಿಗೆ ತಕ್ಕಂತೆಯೇ ಸಮಯವನ್ನು ವಿನಿಯೋಗಿಸಿಕೊಳ್ಳಬೇಕು. ದಿನನಿತ್ಯದ ಸಮಯವನ್ನು ಅಧ್ಯಯನಕ್ಕೆ ಮತ್ತು ಭವಿಷ್ಯದ ಹಾದಿಯನ್ನು ಸ್ಪಷ್ಟಗೊಳಿಸಿಕೊಳ್ಳುವ ಆಲೋಚನೆಗಳಿಗೆ ವಿನಿಯೋಗಿಸಿದಾಗ ಮಹತ್ವದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯ ರೂಢಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅಂತರಾಷ್ಟ್ರೀಯ ಚೆಸ್ ಕ್ರೀಡಾಪಟು ಶಾಬ್ದಿಕ್ ವರ್ಮ ಮಾತನಾಡಿದರು. ದಕ್ಷಿಣ ಕನ್ನಡವೂ ಸೇರಿದಂತೆ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಾಧಿಸುವ ಸಾಮರ್ಥ್ಯ ಇದ್ದೇ ಇರುತ್ತದೆ. ಆದರೆ, ಆತ್ಮವಿಶ್ವಾಸದ ಕೊರತೆಯ ಕಾರಣಕ್ಕಾಗಿಯೇ ಮುಖ್ಯವಾಹಿನಿಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಮುಂದಾಗುವುದಿಲ್ಲ. ಆತ್ಮವಿಶ್ವಾಸದ ಬಲದಲ್ಲಿ ಸಾಧನೆಯ ಹುಮ್ಮಸ್ಸು ಹೆಚ್ಚಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.‌ ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು.

ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಎಸ್.ಎನ್. ಕಾಕತ್ಕರ್ ಉಪಸ್ಥಿತರಿದ್ದರು. ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು.

ವಿದ್ಯಾರ್ಥಿ ಒಕ್ಕೂಟದ ವಿಜ್ಞಾನ ವಿಭಾಗದ ಸಂಯೋಜಕ ಕೆ.ಕಿರಣ್‌ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾನಸ ಅಗ್ನಿಹೋತ್ರಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಕಲಾವಿಭಾಗದ ಸಂಯೋಜಕಿ ಪ್ರತೀಕ್ಷಾ ವಂದಿಸಿದರು.

p>

LEAVE A REPLY

Please enter your comment!
Please enter your name here