ರತ್ನತ್ರಯತೀರ್ಥಕ್ಷೇತ್ರದಲ್ಲಿ ಪ್ರೊ.ನಾ’ವುಜಿರೆ ಸ್ಮರಣಾರ್ಥ ಶಾಸ್ತ್ರದಾನ ಕೃತಿ ಲೋಕಾರ್ಪಣೆ

0

ಬೆಳ್ತಂಗಡಿ: ಧರ್ಮದ ಮರ್ಮವನ್ನರಿತು ನಿತ್ಯಜೀವನದಲ್ಲಿ ಅನುಷ್ಠಾನಗೊಳಿಸಿ ಸದಾ ಸತ್ಕಾರ್ಯಗಳನ್ನು ಮಾಡಿದರೆ ಸಕಲ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಮಾ.28ರಂದು ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯತೀರ್ಥಕ್ಷೇತ್ರದಲ್ಲಿ ಪ್ರೊ. ನಾ’ವುಜಿರೆ ಸ್ಮರಣಾರ್ಥ ಅವರ ಪತ್ನಿ ಸರಸ್ವತಿ ಯನ್.ರಾಜ್, ಮಗ ಪಾರ್ಶ್ವನಾಥ ಜೈನ್, ಸೊಸೆ ರಶ್ಮಿ ಮತ್ತು ಕುಮಾರಿ ಸನಾ ಜೈನ್ ಕುಟುಂಬಸ್ಥರು ಪ್ರಕಟಿಸಿದ ಶಾಸ್ತ್ರದಾನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಂಗಲಪ್ರವಚನ ನೀಡಿದರು.

ಶುಭಚಿಂತನೆಯಿಂದ ಪುಣ್ಯಬಂಧವಾಗುತ್ತದೆ.ಅಶುಭ ಚಿಂತನೆಯಿಂದ ಪಾಪಕರ್ಮಗಳ ಬಂಧವಾಗುತ್ತದೆ. ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಸಕಲ ಜೀವಿಗಳಿಗೂ ಮೋಕ್ಷಪ್ರಾಪ್ತಿ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

ಹುಟ್ಟು-ಸಾವು ದೇಹಕ್ಕೆ ಮಾತ್ರ. ಆತ್ಮನಿಗಿಲ್ಲ.ಆತ್ಮ ಶಾಶ್ವತ. ಆದುದರಿಂದಲೇ ಜೈನರು ಮರಣವನ್ನು ಮೃತ್ಯುಮಹೋತ್ಸವವಾಗಿ ಆಚರಿಸುತ್ತಾರೆ. ಸದಾ ಧರ್ಮಜಾಗೃತಿ ಮತ್ತು ಧರ್ಮ ಪ್ರಭಾವನೆಯಿಂದ ಸುಖ-ಶಾಂತಿ, ನೆಮ್ಮದಿ ಹೊಂದಬಹುದು ಎಂದು ಅವರು ಹೇಳಿದರು.

ಪ್ರೊ.ನಾ’ವುಜಿರೆ ಅವರ ಸರಳ ಜೀವನ, ಉನ್ನತ ಸಾಧನೆ ಮತ್ತು ಧರ್ಮಪ್ರಭಾವನಾ ಕಾರ್ಯವನ್ನು ಅವರು ಶ್ಲಾಘಿಸಿದರು.ಪ್ರೊ.ನಾ’ವುಜಿರೆ ಅವರ ಸಾರ್ಥಕ ಬದುಕಿನ ಬಗ್ಯೆ ನುಡಿನಮನ ಸಲ್ಲಿಸಿದ ಪ್ರೊ. ಶ್ರುತಕೀರ್ತಿರಾಜ, ಜೈನಧರ್ಮದ ಆಚಾರ-ವಿಚಾರಗಳನ್ನು ಸದಾ ಅಕ್ಷರಶಃ ಪಾಲಿಸಿದ ಪ್ರೊ.ನಾ’ವುಜಿರೆ ಆದರ್ಶ ಶ್ರಾವಕರಾಗಿದ್ದರು ಎಂದು ಅವರು ಬಣ್ಣಿಸಿದರು.

ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ 216 ಕಲಶ ಮತ್ತು ಮೂರೂ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ನಡೆಸಲಾಯಿತು.ಶಾಸ್ತ್ರದಾನ ಕೃತಿಯನ್ನು ಎಲ್ಲರಿಗೂ ವಿತರಿಸಲಾಯಿತು.

ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ.ಕುಮಾರ ಹೆಗ್ಡೆ, ಡೀನ್ ಪಿ. ವಿಶ್ವನಾಥ್, ವಿನಯಾ ಜೆ.ಬಳ್ಳಾಲ್, ದಿಲೀಪ್ ಬಳ್ಳಾಲ್, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕ ಎಂ.ಜಿನರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here