

ಬೆಳ್ತಂಗಡಿ: ‘ಸಾಮಾನ್ಯ ಮನುಷ್ಯನಾಗಿದ್ದ ನಾಣು ಮನುಷ್ಯನಿಂದ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಮಾಡಿ ನಾರಾಯಣ ಗುರುಗಳಾದರು. ಅವರು ಕೇವಲ ಪವಾಡ ಪುರುಷ ಮಾತ್ರ ಅಲ್ಲ. ಅವರ ಹಿಂದೆ ಪರಿಶ್ರಮ ಇದೆ. ಅವರು ಸಂಘರ್ಷದ ಕಡೆಗೆ ಸಾಗದೆ ರಚನಾತ್ಮಕ ಸಮಾಜ ಕಟ್ಟುವ ಕಡೆಗೆ ಕಾರ್ಯಪ್ರವೃತ್ತರಾದರು’ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಯೋಗೀಶ್ ಕೈರೋಡಿ ಹೇಳಿದರು.
ಅವರು ಮಾ.19ರಂದು ಬೆಳ್ತಂಗಡಿ ಶ್ರೀ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದರು.
‘ನಾರಾಯಣ ಗುರು ಕೇವಲ ಹೆಸರು ಮಾತ್ರ ಅಲ್ಲ. ಆ ವ್ಯಕ್ತಿ ಸಮಾಜಕ್ಕೆ ನೀಡಿದ ಕೊಡುಗೆ ಮುಖ್ಯವದುದು. ಪರಿವರ್ತನೆ ಎಂಬುದು ಸರಳ ವಿಚಾರವಲ್ಲ. ವ್ಯಕ್ತಿಯೊಬ್ಬ ಶಕ್ತಿಯಾಗಿ ಪರಿವರ್ತನೆ ಆಗಿದ್ದಾರೆ. ಅವರ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸುವುದು ಅವರಿಗೆ ಮಾಡುವ ನಿಜವಾದ ಪೂಜೆಯಾಗಿದೆ’ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಜಯರಾಜ್ ಎನ್ ಪ್ರಸ್ತಾವಿಕವಾಗಿ ಮಾತನಾಡಿ, ‘ನಾರಾಯಣ ಗುರುಗಳು ಅನಿಷ್ಟ ಪದ್ಧತಿ, ಅನಿಷ್ಟ ವ್ಯವಸ್ಥೆ ಇದ್ದ ಕಾಲದಲ್ಲಿ ಹೋರಾಡಬೇಕಾದರೆ ಅವರ ಶಕ್ತಿ ಸಾಮರ್ಥ್ಯ ಆತ್ಮ ಸ್ಥೈರ್ಯ ಮುಖ್ಯವಾದುದು.ಮಹಿಳೆ, ಜಾತಿ, ಶಿಕ್ಷಣ ವಿಚಾರದಲ್ಲಿ ಅವರು ಮಾಡಿದ ಕಾರ್ಯ ಮಹತ್ತರವಾದುದು. ಸ್ವಾರ್ಥವೇ ಎಲ್ಲವನ್ನೂ ನಿರ್ಧರಿಸುವ ಕಾಲ ಘಟ್ಟದಲ್ಲಿ ನಾರಾಯಣ ಗುರುಗಳ ವಿಚಾರ ಅಗತ್ಯವಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ವಹಿಸಿದ್ದರು.ವೇದಿಕೆಯಲ್ಲಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಇದ್ದರು.ನಾರಾಯಣ ಗುರುಗಳ ವಿಚಾರ ಆಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಮನುಜ ಕಾರ್ಯಕ್ರಮ ನಿರೂಪಿಸಿದರು.ಕನ್ನಡ ವಿಭಾಗದ ಉಪನ್ಯಾಸಕ ಸತೀಶ್ ಸಾಲಿಯಾನ್ ಪರಿಚಯಿಸಿದರು.ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶ್ರೀಜಾ ವಂದಿಸಿದರು.