ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 9ಕಿ.ಮೀ ದೂರವಿರುವ ಜಿಲ್ಲೆಯ ತುತ್ತ ತುದಿಯ ಬಾಂಜಾರು ಸಮುದಾಯ ಭವನ ಮತಗಟ್ಟೆ (86)ಕ್ಕೆ ದ.ಕ. ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ, ಯೋಗೇಶ್ ಹೆಚ್.ಆರ್ ಸಮಿತಿ ಸದಸ್ಯರಾದ ಡೊಂಬಯ್ಯ ಇಡ್ಕಿದು ಹಾಗೂ ಬೆಳ್ತಂಗಡಿ ತಾಲೂಕು ಟ್ರೈನರ್ ರವಿಕುಮಾರ್ ಬಿ.ಆರ್ ರವರ ತಂಡ ಮಾ.15ರಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.
ನೆರಿಯ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ನೀಡಿದ ತಂಡ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 241 ಮತಗಟ್ಟೆಗಳ ಪೈಕಿ ಪಂಚಾಯತ್ ವ್ಯಾಪ್ತಿಯ ಬಾಂಜಾರು ಮತಗಟ್ಟೆಯಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶೇ 99.06ರಷ್ಟು ಮತದಾನವಾಗುವ ಮೂಲಕ ಪ್ರಥಮ ಸ್ಥಾನದಲ್ಲಿರುವುದನ್ನು ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ಟ್ರೈನರ್ ಯೋಗೇಶ್ ಹೆಚ್.ಆರ್ ಈ ಮತಗಟ್ಟೆಯು ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶದ ಅತ್ಯಂತ ತಗ್ಗಿನಲ್ಲಿದ್ದು ಇಲ್ಲಿನ ಮಲೆಕುಡಿಯ ಸಮುದಾಯದ ಹಿರಿಯರು ಅನಕ್ಷರಸ್ಥರಾಗಿದ್ದರೂ ಯುವ ವಿದ್ಯಾವಂತ ಮತದಾರರು,ಬಿಎಲ್ಒ ಹಾಗೂ ಇತರ ಅಧಿಕಾರಿಗಳ ಪ್ರೇರಣೆಯಿಂದ ಮತದಾನದಲ್ಲಿ ತಪ್ಪದೇ ಭಾಗವಹಿಸುವಲ್ಲಿ ಹೊಂದಿರುವ ಕಾಳಜಿ ಹಾಗು ಸ್ಥಿತ ಪ್ರಜ್ಞೆಯನ್ನು ಶ್ಲಾಘಿಸಿದರು.ಈ ಕಾರಣದಿಂದಾಗಿ ಈ ಮತಗಟ್ಟೆಯನ್ನು ದ.ಕ ಜಿಲ್ಲೆಯ ಅನನ್ಯ ಮತಗಟ್ಟೆಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಇಂದಿನ ಭೇಟಿಯ ವರದಿಯನ್ನಾಧರಿಸಿ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ ಎಂದು ತಿಳಿಸಿದರು.
ಈ ಸಾಧನೆಯ ಹಿಂದೆ ಮತದಾರರ ಪಟ್ಟಿಯನ್ನು ವ್ಯವಸ್ಥಿತವಾಗಿ ಪರಿಷ್ಕರಣೆ ಮಾಡುವಲ್ಲಿ ಬಿ.ಎಲ್.ಓ ಮಧುಮಾಲ ರವರು ವಹಿಸಿರುವ ಪಾತ್ರವನ್ನು ಸ್ಮರಿಸಿ ತಾಲೂಕು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಪರವಾಗಿ ತೇಜಾಕ್ಷಿಯವರು ಅವರನ್ನು ಅಭಿನಂದಿಸಿದರು.ನೆರಿಯ ಗ್ರಾಮ ಪಂಚಾಯಿತಿಯು ಈ ಮತಗಟ್ಟೆಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತಗಟ್ಟೆಗೆ ಮತ್ತಷ್ಟು ವೈವಿಧ್ಯತೆ ತರುವಲ್ಲಿ ಪಂಚಾಯತ್ ನ ಸಹಕಾರ ಅಗತ್ಯವೆಂದು ಯೋಗೇಶ ತಿಳಿಸಿದರು.
ಈ ಸಂದರ್ಭದಲ್ಲಿ ನೆರಿಯ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅಜಿತ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಬಿ.ಎಲ್.ಓ ಅವರೊಂದಿಗೆ ಬಾಂಜಾರು ಮಲೆ ಸಮುದಾಯ ಭವನ ಮತಗಟ್ಟೆಗೆ ಭೇಟಿ ಕೊಟ್ಟ ತಂಡ ಮತಗಟ್ಟೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ ಅಲ್ಲಿನ ಪುರುಷ ಹಾಗೂ ಮಹಿಳಾ ಮತದಾರರನ್ನು ಭೇಟಿ ಮಾಡಿ ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಡೊಂಬಯ್ಯ ಇಡ್ಕಿದು ಹಾಗೂ ತಾಲೂಕು ಸ್ವೀಪ್ ಸಮಿತಿ ಸದಸ್ಯ ರವಿಕುಮಾರ್ 2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರೂ ತಪ್ಪದೇ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣವನ್ನು ಶೇ.100 ಕ್ಕೆ ಹೆಚ್ಚಿಸಿ ರಾಜ್ಯಕ್ಕೇ ಮಾದರಿ ಮತಗಟ್ಟೆಯಾಗಿ ದಾಖಲಾಗುವಂತೆ ವಿನಂತಿಸಿಕೊಂಡರು.