ಬೆಳ್ತಂಗಡಿ: ದ.ಕ ವಿಭಾಗದ ಚಾರ್ಮಾಡಿ ಘಾಟಿ ರಸ್ತೆ ಹಾಗೂ ಧರ್ಮಸ್ಥಳದಿಂದ ಕುದ್ರಾಯ ತನಕದ ರಸ್ತೆಯ ಬದಿಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಮಾ.2ರಂದು ನಡೆಯಿತು.
ಅರಣ್ಯ ಇಲಾಖೆ, ಚಾರ್ಮಾಡಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಬದಿ ಎಸೆಯಲಾಗಿದ್ದ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯಿತಿಗಳ ತ್ಯಾಜ್ಯ ಘಟಕಕ್ಕೆ ಸಾಗಿಸಲಾಯಿತು.
ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ವನ್ಯಜೀವಿಗಳು ವಾಸವಾಗಿದ್ದು ಪ್ರವಾಸಿಗರು ಪ್ಲಾಸ್ಟಿಕ್ ನ್ನು ರಸ್ತೆ ಬದಿ ಎಸೆಯುವುದರಿಂದ ಆಹಾರ ಅರಸಿ ಬರುವ ಪ್ರಾಣಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಹಾಗೂ ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ ಎಲ್ಲೆಂದರಲ್ಲಿ ಕಸ ಎಸೆಯುವ ಸಂಸ್ಕೃತಿಗೆ ಮಂಗಳಹಾಡಿ ಕಸದ ಬುಟ್ಟಿಗಳಲ್ಲೇ ಕಸ ಎಸೆಯಬೇಕು” ಎಂದು ವಲಯ ಅರಣ್ಯ ಅಧಿಕಾರಿ ಬಿ.ಜಿ. ಮೋಹನ್ ಕುಮಾರ್ ಹೇಳಿದರು.
ಸಮಾಜ ಸೇವಕ ಸಚಿನ್ ಭಿಡೆ, ಉಮೇಶ್ ಗೌಡ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಕಚೇರಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕಾರ ನೀಡಿದರು.