ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇದರ ಸೇವಾ ಯೋಜನೆಯಾದ ಶ್ರೀ ಕೃಷ್ಣ ಯೋಗಕ್ಷೇಮ (ಮನೆಬಾಗಿಲಿಗೆ ವೈದ್ಯಕೀಯ ಸೇವೆ) ಇದರ ವಿಸ್ತರಣೆ ಮತ್ತು ವಿಸ್ತೃತ ವಸತಿ ಸಮುುಚ್ಚಯ ಹಾಗೂ ಶ್ರೀ ಕೃಷ್ಣ ಯೋಗಕ್ಷೇಮಕ್ಕೆ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಫೆ.8ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಂಸಿ ಮಂಗಳೂರು ಇಲ್ಲಿನ ಖ್ಯಾತ ಹೃದಯರೋಗ ತಜ್ಞರಾದ ಡಾ.ಎಂ.ಎನ್ ಭಟ್ ನೆರವೇರಿಸಿದರು.ನಂತರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಜನರಿಗೆ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದರ ಜೊತೆಗೆ ಮನೆಬಾಗಿಲಿಗೆ ವೈದ್ಯಕೀಯ ಸೇವೆ ಎಂಬ ಸೇವಾ ಯೋಜನೆಯನ್ನು ಸುಮಾರು ಎಂಟು ವರ್ಷಗಳ ಹಿಂದೆ ಪ್ರಾರಂಭಿಸಿರುವ ಮುನ್ನಡೆಸುತ್ತಿರುವ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯರ ಸೇವಾ ಕಾರ್ಯವನ್ನು ಶ್ಲಾಘಿಸಿದರು ಮತ್ತು ಹೃದಯ ರೋಗ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಿ ಪ್ರಾಸ್ತಾವಿಕ ಮಾತನಾಡಿ ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯ ಸೌಲಭ್ಯವನ್ನು ವಿವರಿಸಿದರು ಮತ್ತು ಇದುವರೆಗೆ ಕೆಲವು ಗ್ರಾಮಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನಾದ್ಯಂತ ವಿಸ್ತರಿಸಲಾಗಿದೆ ಹಾಗೂ ಆಸ್ಪತ್ರೆಗೆ ಹೋಗಲು ಅಸಾಧ್ಯವಾದ ಹಾಸಿಗೆ ಹಿಡಿದ ರೋಗಿಗಳಿಗೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಣೆಗಾರರು ವಸಂತ ಮಂಜಿತ್ತಾಯ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗಿರೀಶ್ ಕುದ್ರೆಂತಾಯ, ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ ನೂಜಿ ಮಾತನಾಡಿ ಕಾರ್ಯಕ್ರಮಕ್ಕೆ ಮೆಚ್ಚುಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನ ಆಡಳಿತ ನಿರ್ದೇಶಕ ನವೀನ್ ಭಟ್ ತಳವಾರ್, ತುಳು ಶಿವಳ್ಳಿ ಸಂಘದ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಶಂಕರನಾರಾಯಣ ಕೊಂಡಂಚ, ರಾಜ್ ಪ್ರಸಾದ್ ಪೊಲ್ನಾಯ, ಕರ್ನಾಟಕ ಬ್ಯಾಂಕ್ ನೆರಿಯ ಶಾಖೆ ಪ್ರಬಂಧಕರಾದ ಅವಿನಾಶ್, ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ ಸ್ವರೂಪ್, ಆಸ್ಪತ್ರೆಯ ವೈದ್ಯರುಗಳಾದ ಡಾ.ಅಲ್ಬಿನ್ ಜೋಸೆಫ್, ಡಾ.ಮೌಲ್ಯ, ಡಾ.ಅಖಿಲ್ ರಾಜ್ ಹಾಗೂ ಸಿಬ್ಬಂದಿಗಳು ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಯೋಗಕ್ಷೇಮ ಇದರಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿದ ಡಾ.ಅಲ್ಬಿನ್ ಜೋಸೆಫ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಾ.ವಂದನಾ ಎಂ ಇರ್ವತ್ರಾಯ ಸ್ವಾಗತಿಸಿ, ಆರಿಶ್ ಕಾರ್ಯಕ್ರಮ ನಿರೂಪಿಸಿ, ವಿನಯ ಕಿಶೋರ್ ಶೆಟ್ಟಿ ಧನ್ಯವಾದವಿತ್ತರು.ಗಣೇಶ್ ಇವರು ಕಾರ್ಯಕ್ರಮ ನಿರ್ವಹಿಸಿದರು.