ಬೆಳ್ತಂಗಡಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಜ.22ರಂದು ಬೆಳಿಗ್ಗೆ ನಡೆಯಲಿದ್ದು ಈ ದೃಶ್ಯಗಳನ್ನು ಕಣ್ಣುಂಬಿಕೊಳ್ಳಲು ತಾಲೂಕಿನ ಬಹುತೇಕ ಎಲ್ಲಾ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಿದ್ಧತೆ ನಡೆದಿದೆ.
ತಾಲೂಕಿನ ಬಹುತೇಕ ಎಲ್ಲಾ ದೇವಸ್ಥಾನ, ಭಜನಾ ಮಂದಿರ, ಧಾರ್ಮಿಕ ಶ್ರದ್ದಾಕೇಂದ್ರ ಸೇರಿದಂತೆ ಹಲವು ಕಡೆಗಳಲ್ಲಿ ಅಯ್ಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯುವ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ನೇರ ಪ್ರಸಾರ ವೀಕ್ಷಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಜೊತೆಗೆ ದೇವಾಲಯ, ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಶ್ರೀ ರಾಮದೇವರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಬೆಳಿಗ್ಗೆಯಿಂದಲೇ ಭಜನೆ, ಹೋಮ ಹವನ, ಶ್ರೀರಾಮದೇವರ ಸ್ಮರಣೆ, ಶ್ರೀ ರಾಮತಾರಕ ಮಂತ್ರ, ರಾಮಕಥಾ ಗಾಯನ, ಹರಿಕಥೆ, ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕರ ಸೇವಕರಿಗೆ ಗೌರವಾರ್ಪಣೆಯೂ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ವ್ಯವಸ್ಥೆಯೂ ಮಾಡಲಾಗಿದೆ.
ಉತ್ತರ ದಿಕ್ಕಿಗೆ ಆರತಿ, ಹಣತೆ: ಜ.22ರಂದು ಸಂಜೆ ಮನೆಯ ಉತ್ತರ ದಿಕ್ಕಿಗೆ ಹಣತೆಗಳನ್ನು ಬೆಳಗಿಸಿ ದೀಪಾವಳಿ ಆಚರಿಸಲು ಪ್ರಧಾನಿ ಮೋದಿ ಈಗಾಗಲೇ ಕರೆ ನೀಡಿದ್ದಾರೆ.ಅದರಂತೆ ಭಕ್ತಾದಿಗಳು ಹಣತೆ ಬೆಳಗಿ ಅಯೋಧ್ಯೆ ಇರುವ ಉತ್ತರದಿಕ್ಕಿಗೆ ಆರತಿ ಬೆಳಗಿ ಶ್ರೀರಾಮ ತಾರಕ ಮಂತ್ರ ಜಪಿಸಬಹುದಾಗಿದೆ.ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಈಗಾಗಲೇ ಮನೆ ಮನೆಗೆ ತಲುಪಿಸಲಾಗಿದೆ. ಇದರ ಜೊತೆಗೆ ಹಣತೆಯನ್ನೂ ವಿತರಿಸಲಾಗಿದ್ದು ಸಂಜೆ ದೇವಸ್ಥಾನಗಳಲ್ಲಿ ಹಚ್ಚುವಂತೆ ಸೂಚನೆ ನೀಡಲಾಗಿದೆ.
ರಾರಾಜಿಸುತ್ತಿರುವ ಕೇಸರಿ ಧ್ವಜ, ಪ್ಲೆಕ್ಸ್: ತಾಲೂಕಿನಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿ ಪ್ಲೆಕ್ಸ್, ಕಟೌಟ್, ಅಳವಡಿಸಲಾಗಿದೆ.ಬ್ರಹತ್ ಗಾತ್ರದ ಪ್ಲೆಕ್ಸ್‌ಗಳನ್ನು ವೈಯುಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಮುಂಗಟ್ಟುಗಳ ಅಳವಡಿಸಲಾಗಿದೆ. ಭವ್ಯ ರಾಮಮಂದಿರದ ಚಿತ್ರ, ಕೋದಂಡರಾಮನ ಚಿತ್ರ ಹಾಗೂ ಶ್ರೀ ರಾಮನಿಗೆ ಸಂಬಂಧಿಸಿದ ಇತರ ಚಿತ್ರಗಳ ವೈಭವ ಪ್ಲೆಕ್ಸ್‌ನಲ್ಲಿ ಕಂಗೊಳಿಸುತ್ತಿದೆ.ಇದಲ್ಲದೆ ಕಚೇರಿಯಲ್ಲಿ ಕೇಸರಿ ತೋರಣ, ಭಗವಾಧ್ವಜ, ಬಂಟಿಂಗ್ಸ್ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾರಾಜಿಸುತ್ತಿದೆ.ಅಂಗಡಿಗಳಲ್ಲಿ ಕೇಸರಿ ಶಾಲು, ಕೇಸರಿ ಧ್ವಜದ ಮಾರಾಟ ಭರದಿಂದ ಸಾಗುತ್ತಿದೆ.ವಾಹನಗಳಲ್ಲಿ ಕೇಸರಿ ಧ್ವಜ ಅಳವಡಿಸಲಾಗಿದೆ.
ಬಿಗಿಬಂದೋಬಸ್ತ್: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಕಣ್ಗಾವಲಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಅಯೋಧ್ಯೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಯೋಧ್ಯೆ ಕಾರ್ಯಕ್ರಮ: ಬೆಳಿಗ್ಗೆ 10 ರಿಂದ 12ರ ತನಕ ಮಂಗಳ ಧ್ವನಿ ಕರ್ನಾಟಕದ ವೀಣೆ ಸಹಿತ ವಿವಿಧ ರಾಜ್ಯಗಳಿಂದ ಬಂದಿರುವ 50 ವಾದ್ಯಗಳಿಂದ ಸಂಗೀತ ಸುಧೆ
ಬೆಳಿಗ್ಗೆ 10.55: ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ
12.05: ಪ್ರಾಣ ಪ್ರತಿಷ್ಠಾಪನೆ ಪೂಜೆ ಆರಂಭ
12.29:08ರಿಂದ 12.30:32ವರೆಗಿನ 84 ಸೆಕೆಂಡ್‌ಗಳ ಅಭಿಜಿತ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಗಣೇಶ್ವರ ದ್ರಾವಿಡ್ ಮತ್ತು ಲಕ್ಷ್ಮೀಕಾಂತ ದೀಕ್ಷಿತ್ ನೇತೃತ್ವದಲ್ಲಿ ಪೂಜೆ
ಸಿನಿಮಾ ತಾರೆಯರ, ರಾಜಕೀಯ, ಧಾರ್ಮಿಕ ಮುಖಂಡರ ಸಹಿತ 7 ಸಾವಿರಕ್ಕೂ ಅಧಿಕ ಅತಿಥಿಗಳಿಗೆ ಉಪಸ್ಥಿತಿ
ಸುದ್ದಿ ನ್ಯೂಸ್ ಪುತ್ತೂರು ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ