ಮುಂಡಾಜೆಯಲ್ಲಿ ರಂಗನಾಥ ಭಟ್ ಸಂಸ್ಮರಣೆ ಕಾರ್ಯಕ್ರಮ

0

ಮುಂಡಾಜೆ: 20ನೇ ಶತಮಾನದ ಪೂರ್ವಾರ್ಧದಲ್ಲಿ ಸುಮಾರು 20ವರ್ಷ ಕಾಲ ಶ್ರೀ ಅಂಬಾ ಪ್ರಸಾದಿತ ಕರ್ನಾಟಕ ಸಂಗೀತ ನಾಟಕ ಮಂಡಳಿ ಸ್ಥಾಪಿಸಿ ಕರ್ನಾಟಕದಾದ್ಯಂತ ಸಾವಿರಾರು ಪ್ರದರ್ಶನ ನೀಡಿ ನೂರಾರು ಕಲಾವಿದರನ್ನು ಪರಿಚಯಿಸುವ ಮೂಲಕ ಹೆಸರು ಗಳಿಸಿದ್ದ ಮುಂಡಾಜೆ ರಂಗನಾಥ ಭಟ್ ತಾಮನ್ಕರ್ ಅವರು ನಿಧನ ಹೊಂದಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಸಂಸ್ಮರಣೆ ಕಾರ್ಯಕ್ರಮ ಜರಗಿತು.

ಮುಂಡಾಜೆ ಕೆರೆ ಶ್ರೀ ಪರಶುರಾಮ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ,ಪತ್ರಕರ್ತ ಶ್ರೀಕರ ಭಟ್ ನುಡಿನಮನ ಸಲ್ಲಿಸಿ “ಅದ್ವಿತೀಯ ಸಾಧನೆ ಮೂಲಕ ಮನೆ ಮಾತಾದವರು.ಹಲವು ಏಳು-ಬೀಳುಗಳ ಮೂಲಕ ಜೀವನ ನಡೆಸಿದವರು.ಕಂಪೆನಿ ನಷ್ಟದಲ್ಲಿ ನಡೆದಾಗ ತಮಗೆ ಬಂದ ಪಾರಿತೋಷಕ,ಫಲಕಗಳನ್ನು ಮಾರಾಟ ಮಾಡಿ ಕಲಾವಿದರ ಬದುಕು ಕಟ್ಟಿದವರು.ನಾಟಕದ ಜತೆ ಅಪಾರ ಸಂಗೀತ ಜ್ಞಾನವು ಅವರಲ್ಲಿ ಮೇಳೈಸಿತ್ತು.ಕಲಾವಿದರನ್ನು ಗುರುತಿಸುವ ವಿಶಿಷ್ಟ ಕಲೆ ಅವರಲ್ಲಿತ್ತು.ಇಡೀ ಕರ್ನಾಟಕ ರಂಗ ಭೂಮಿಯನ್ನು ಹಲವು ಕಾಲ ಆಳಿದವರು.ರಂಗ ಭೂಮಿಯ ಧ್ರುವ ನಕ್ಷತ್ರ ಆಗಿದ್ದವರು.ಕ್ರಾಂತಿಕಾರಿ ವ್ಯಕ್ತಿತ್ವದ ಮೂಲಕ ಇತಿಹಾಸ ನಿರ್ಮಿಸಿದವರು” ಎಂದು ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಮುಖ್ಯ ಪ್ರಬಂಧಕ ಹೇಮಂತ ಭಿಡೆ ಅಧ್ಯಕ್ಷತೆ ವಹಿಸಿದ್ದರು.

ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಮಾತನಾಡಿ”ದೊಡ್ಡ ಮನೆತನದ ಸರಸ್ವತಿ ಪುತ್ರರಾದ ಇವರು ಬಾಲ್ಯದಲ್ಲೇ ನಾಟಕ ಕಂಪೆನಿ ಸೇರುವಾಗ ಅವರಿಗೆ ನಾಟಕಗಳ ಯಾವುದೇ ಜ್ಞಾನ ಇರಲಿಲ್ಲ.ಆದರೆ ಅವರು ತಮ್ಮ ಸಾಧನೆ ಮೂಲಕ ರಾಜ್ಯದಲ್ಲಿ ಮೊದಲ ಟೆಂಟ್ ಕಂಪೆನಿ ಆರಂಭಿಸಿದವರು.ಸಾಧಿಸಿದರೆ ಯಾವ ಕೆಲಸವು ಮಾಡಬಹುದು ಎಂಬುದಕ್ಕೆ ಅವರು ಉತ್ತಮ ನಿದರ್ಶನ.ಕಲಾವಿದನ ನಿಜ ಬದುಕು ಯಾವ ರೀತಿ ಇರುತ್ತದೆ ಎಂಬುದಕ್ಕೆ ಇವರು ಸಾಕ್ಷಿ.ರಾಯರ ಸೊಸೆ,ಶೂರಸೇನ ಇವರ ಪ್ರಖ್ಯಾತ ನಾಟಕಗಳಾಗಿದ್ದವು” ಎಂದು ಹೇಳಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಫಡಕೆ, ಜಗದೀಶ್ ಆರ್.ಫಡಕೆ, ಮುಂಡಾಜೆ ಚಿತ್ಪಾವನ ಸಂಘಟನೆ ಅಧ್ಯಕ್ಷೆ ಸುಷ್ಮಾ ಎಸ್.ಭಿಡೆ, ಕಾರ್ಯದರ್ಶಿ ರಂಗನಾಥ ಹೆಬ್ಬಾರ್, ಮಧುಕರ ತಾಮನ್ಕರ್, ರಾಧಾ.ವಿ.ಫಡಕೆ, ಕಿರಣ್ ಖಾಡಿಲ್ಕರ್ ಉಪಸ್ಥಿತರಿದ್ದರು.

ಆರ್ ಬಿಐಯ ಸಲಹಾ ಸಮಿತಿ ಸದಸ್ಯ ಡಾ.ಶಶಾಂಕ ಭಿಡೆಯವರನ್ನು ಸನ್ಮಾನಿಸಲಾಯಿತು.ವಾಸುದೇವ ಗೋಖಲೆ ಸ್ವಾಗತಿಸಿದರು.ನಾರಾಯಣ ಫಡಕೆ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಾ ಧನಂಜಯ ಭಿಡೆ ಮತ್ತು ಬಳಗದವರಿಂದ ರಂಗನಾಥ ಭಟ್ ಅವರ ಜೀವನದ ಕುರಿತ ಗೀತ-ರೂಪಕ ನಡೆಯಿತು.

LEAVE A REPLY

Please enter your comment!
Please enter your name here