ಮಡಂತ್ಯಾರು: ಪ್ರತಿಯೊಬ್ಬ ಮಾನವನು ದೇವ ಸ್ವರೂಪಿಯಾಗಿದ್ದಾನೆ.ಸರ್ವರೂ ಒಂದೇ ಎಂಬ ಸಮಭಾವ ಇದ್ದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ.ಸರ್ವಧರ್ಮಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗಲೇ ಭಾವೈಕ್ಯತೆಗೆ ನಿಜವಾದ ಅರ್ಥ ಪ್ರಾಪ್ತವಾಗುತ್ತದೆ. ಪ್ರಸ್ತುತ ಧರ್ಮ ಧರ್ಮಗಳ ಸಮನ್ವಯತೆಯು ಅತ್ಯ ಅಗತ್ಯವಾಗಿದೆ.ಹೃದಯ ವೈಶಾಲ್ಯತೆಯಿಂದ ಸೌಹಾರ್ದತೆ ಸಾಧ್ಯ ಎಂದು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕ ವಂ|ಡಾ|ಸ್ಟ್ಯಾನಿ ಗೋವಿಯಸ್ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಜರುಗಿದ ಭಾವೈಕ್ಯತೆಯ ಸಂಗಮ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾಭ್ಯಾಸವು ಬರೆ ಶಾಲಾ ಕೊಠಡಿ, ಪಠ್ಯಕ್ಕೆ ಮಾತ್ರ ಸೀಮಿತವಲ್ಲ ಸಾಮಾಜಿಕ, ಆಧ್ಯಾತ್ಮಿಕ, ನೈತಿಕವಾಗಿ ಬೆಳೆದು ಅದು ಸಮಾಜಕ್ಕೆ ವ್ಯಾಪಿಸಿಕೊಳ್ಳುವಂತಾಗಬೇಕು ಎಂದು ಸಂದೇಶ ನೀಡಿದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನ ಪ್ರಧಾನ ಧರ್ಮಗುರು ಅತೀ|ವಂ ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ , ಧಾರ್ಮಿಕ ಚಿಂತಕ ಅಶೋಕ್ ಭಟ್ ಉಜಿರೆ, ಮಹಮ್ಮದ್ ಶಫೀಕ್ ಧರ್ಮ ಗುರುಗಳು ಬದ್ರಿಯಾ ಜುಮ್ಮಾ ಮಸೀದಿ ನೀರುಮಾರ್ಗ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಅತೀ|ವಂ ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ದೇವರ ಹೆಸರಿನಲ್ಲಿ ಆಚರಣೆ ಮಾತ್ರ ನಡೆಯುತ್ತಿದೆ ಧರ್ಮದ ಮೂಲ ತತ್ವವನ್ನು ಜನತೆ ಮರೆತಂತಿದೆ.ಪ್ರೀತಿ ಶಾಂತಿ ಸದ್ಗುಣಗಳಿಂದ ಬಾಳುವುದು ಇಂದಿನ ಅವಶ್ಯಕತೆಯಾಗಿದೆ.ಪರಿಪೂರ್ಣ ಹೃದಯದಿಂದ ಪರರನ್ನು ಪ್ರೀತಿಸಬೇಕು, ಸಹಕಾರ ಮನೋಭಾವದಿಂದ ಭಾವೈಕ್ಯತೆ ಸೌಹಾರ್ದತೆ ಬೆಳೆಯಲು ಸಾಧ್ಯ ಎಂದು ಅವರು ಸಂದೇಶ ನೀಡಿದರು.
ಧಾರ್ಮಿಕ ಚಿಂತಕ ಅಶೋಕ್ ಭಟ್ ಮಾತನಾಡುತ್ತಾ ಆರಾಧನ ಕ್ರಮದಲ್ಲಿ ಭಿನ್ನತೆ ಇದೆ ಅದರೆ ಆರಾಧನ ಶ್ರದ್ಧೆ ಒಂದೇಯಾಗಿದೆ. ಮನುಷ್ಯ ಮನುಷ್ಯನನ್ನು ಪರಸ್ಪರ ಪ್ರೀತಿಸಬೇಕು, ವಿಶ್ವಾಸ ಇಟ್ಟುಕೊಳ್ಳಬೇಕು. ನಮ್ಮಲ್ಲಿ ಸ್ವಾರ್ಥವಿದ್ದಾಗ ,ಸಂಪತ್ತಿದ್ದಾಗ ಜಾತಿ ಧರ್ಮದ ಅಂಧಶ್ರದ್ಧೆ ಇರುತ್ತದೆ, ಸಂಕಷ್ಟಕ್ಕೆ ಒಳಗಾದಾಗ ಜಾತಿ ಧರ್ಮ ಯಾವುದು ಇರಲ್ಲ. ಪ್ರತಿಯೊಬ್ಬನನ್ನು ಪ್ರೀತಿ ಸ್ನೇಹ ಸಹೋದರ ಭಾವದಿಂದ ಕಂಡುಕೊಳ್ಳಬೇಕಾಗಿದೆ.ಅತ್ಯಂತ ಪರಮ ಶ್ರೇಷ್ಠ ಧರ್ಮ ಸೇವಾ ಅದುವೇ ಮನುಷ್ಯ ಧರ್ಮ ಎಂದು ಅವರು ಹೇಳಿದರು.
ನೀರುಮಾರ್ಗ ಜುಮ್ಮಾ ಮಸೀದಿಯ ಧರ್ಮಗುರು ಮೊಹಮ್ಮದ್ ಶಫೀಕ್ ಮನುಷ್ಯ ಮನುಷ್ಯನ ಮಧ್ಯೆ ಜಾತಿ ಧರ್ಮವೆಂಬ ಎರಡು ದ್ವೀಪಗಳು ನಿರ್ಮಾಣವಾಗಿದೆ.ಮನುಷ್ಯ ಮನುಷ್ಯರ ನಡುವೆ ಪರಸ್ಪರ ಪ್ರೀತಿ ಆತ್ಮೀಯತೆ ಬೆಳೆಯ ಬೇಕಾಗಿದೆ.ಮತ್ತೊಬ್ಬನ ಆರಾಧನೆಯನ್ನು ಆಚರಣೆಯನ್ನು ಗೌರವಿಸುವುದು ನಿಜವಾದ ಸೌಹಾರ್ದತೆಯಾಗಿದೆ. ಶಾಂತಿ ಸಹನೆ ಸಹಬಾಳ್ವೆ ಸಂದೇಶವನ್ನು ಜಗತ್ತಿಗೆ ಸಾರಿದ ಇಸ್ಲಾಂ ಧರ್ಮ ಸರ್ವಧರ್ಮ ಸಮನ್ವಯತೆಗೆ ಪ್ರಾಮುಖ್ಯತೆ ನೀಡಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಮೂವರು ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಮೋರಸ್, ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ, ವಿವೇಕ್ ವಿನ್ಸೆಂಟ್ ಪಾಯ್ಸ್, ಲಿಯೋ ರೊಡ್ರಿಗಸ್, ವಿನೋದ್ ರಾಕೇಶ್ ಡಿಸೋಜ, ಲಿಯೋ ನರೊನ್ಹಾ ಹಾಗೂ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೋಮ್ ಡಿಸೋಜ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಮೋಹನ್ ನಾಯಕ್, ವಂ| ದೀಪಕ್ ಡೇಸಾ ಸಂಪನ್ಮೂಲ ವ್ಯಕ್ತಿಗಳ ಪರಿಚಯಗೈದರು.ಗಾರ್ಡಿಯನ್ ಏಂಜಲ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಮೋನಿಕಾ ಲೋಬೊ ವಂದಿಸಿದರು.ಉಪನ್ಯಾಸಕ ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.