ಮಡಂತ್ಯಾರು: “ಜಗತ್ತಿನ ಎಲ್ಲ ಭಾಷೆಗಳಿಗೂ ಅದರದೇ ಆದ ಸ್ಥಾನಮಾನಗಳಿವೆ.ಯಾವ ಭಾಷೆಯೂ ಮೇಲೂ ಅಲ್ಲ ಕೀಳೂ ಅಲ್ಲ, ಎಲ್ಲ ಭಾಷೆಯ ಸಮೃದ್ಧತೆಯ ಅರಿವು ನಮಗಿರಬೇಕು.ಮಾತೃಭಾಷೆಯನ್ನು ಪ್ರೀತಿಸುವುದರೊಂದಿಗೆ ಅನ್ಯ ಭಾಷೆಯನ್ನು ಗೌರವಿಸಬೇಕು” ಎಂಬುದಾಗಿ ಮುಖ್ಯ ಗ್ರಂಥಪಾಲಕರಾದ ಪ್ರೊ.ಪೌಲ್ ಮಿನೇಜಸ್ ಹೇಳಿದರು.
ಅವರು ನ.21ರಂದು ರಾಷ್ಟ್ರೀಯ ಏಕೀಕರಣ ಸಪ್ತಾಹ-ಭಾಷಾ ಸಾಮರಸ್ಯ ದಿನದ ಅಂಗವಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಾಹಿತ್ಯ ಸಂಘ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಐಕ್ಯೂಎಸಿ ಸಂಯೋಜಕರಾದ ಪ್ರೊ.ರಾಬಿನ್ ಸೇರಾ ಅವರು “ಕುವೆಂಪು ಅವರ ಮನುಜಮತ-ವಿಶ್ವಪಥದ ಕಲ್ಪನೆಯಂತೆ ನಾವೆಲ್ಲರೂ ನಡೆಯಬೇಕು.ಸರ್ವರಿಗು ಸಮಬಾಳು ಸರ್ವರಿಗು ಸಮಪಾಲು ಎಂಬ ತತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರರ ಭಾಷೆ -ಸಂಸ್ಕೃತಿಯನ್ನು ಗೌರವಿಸಿ ಸೌಹಾರ್ದ ಬದುಕನ್ನು ನಾವು ಬಾಳಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಾಹಿತ್ಯ ಸಂಘದ ಸಂಯೋಜಕರಾದ ಡಾ.ಲತಾ, ಆಂಗ್ಲಭಾಷಾ ಉಪನ್ಯಾಸಕಿ ದೀಪ್ತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗ ಮುಖ್ಯಸ್ಥರಾದ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಆಶಯಗೀತೆ ಹಾಡಿದರು.ಬಳಿಕ ವಿದ್ಯಾರ್ಥಿಗಳಿಗೆ ಚಿತ್ರಕವನ ಸ್ಪರ್ಧೆ ಮತ್ತು ಬಹುಭಾಷಾ ಕವಿಗೋಷ್ಠಿ ನಡೆಯಿತು.