ನಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀಮತಿ ಅಂಬಾ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಮಾತನಾಡಿ ಪ್ರತಿಷ್ಠಾನದ ಸೇವಾ ಕಾರ್ಯಗಳು ನಿಸ್ವಾರ್ಥದಿಂದ ಕೂಡಿದ್ದು ಸದಸ್ಯರ ಬದ್ಧತೆಯಿಂದ ಉತ್ತಮ ಕಾರ್ಯಗಳು ನಡೆಯುವಂತಾಗಲಿ ಎಂದು ತಿಳಿಸಿ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ದಶಂಬರ 17 ರಂದು ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ನಡೆಸಲಾಗುವುದೆಂದರು.
ಪ್ರತಿಷ್ಠಾನದ ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ ಮತ್ತು ಉದಯಶಂಕರ ರೈ ಪುಣಚ ಉತ್ತರ ಭಾರತದ ತೀರ್ಥಕ್ಷೇತ್ರಗಳ ಯಾತ್ರೆಯ ಅನುಭವವನ್ನು ಹಂಚಿಕೊಂಡರು. ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣಗೌಡ ಮಾತನಾಡಿ ಸೇವಾ ಪ್ರತಿಷ್ಠಾನದ ವತಿಯಿಂದ ಬಾಲ್ಯ ಮತ್ತು ಕೌಮಾರ್ಯವಸ್ಥೆಯಲ್ಲಿರುವ ಪೀಳಿಗೆಗೆ ಮೌಲ್ಯಯುತ ಜೀವನ ನಡೆಸಲು ಹಿರಿಯರ ಅನುಭವದ ವಿನಿಯೋಗವಾಗಬೇಕೆಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ವಿಚಾರವಿನಿಮಯ ಮಾಡಿದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಅನಾರು ಕೃಷ್ಣಶರ್ಮ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೀತಾರಾಮ ಶೆಟ್ಟಿ ಉಜಿರೆ, ಮನಮೋಹನ ರಾವ್ ಬಿ.ಸಿ.ರೋಡು, ಚಂದ್ರಶೇಖರ ಆಳ್ವ ಪಡುಮಲೆ ,ಸಂಜೀವ ಪಾರೆಂಕಿ, ರಾಘವ.ಎಚ್ ಗೇರುಕಟ್ಟೆ, ಗಣೇಶ ಭಟ್ ಕುತ್ರೊಟ್ಟು, ದೇವಳದ ಕಚೇರಿ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ನಾಳ ಮೊದಲಾದವರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ ಪೆರ್ವೊಡಿ ನಾರಾಯಣ ಭಟ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದ.ಕ ಜಿಲ್ಲಾ ಗಮಕ ಕಲಾಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕಾರ ನೀಡಿದರು.
ಪ್ರತಿಷ್ಠಾನದ ಸಹ ಸಂಚಾಲಕರಾದ ಭಾಸ್ಕರ ಬಾರ್ಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ದುಗ್ಗಪ್ಪ.ಯನ್ ಕಾರ್ಯಕ್ರಮ ನಿರೂಪಿಸಿದರು.