


ಉಜಿರೆ: ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಕರ್ನಾಟಕವನ್ನು ಕನ್ನಡಿಗರು ಪಡೆಯಲು ದೀರ್ಘವಾದ ಏಕೀಕರಣದ ಹೋರಾಟವನ್ನೆ ನಡೆಸಿದ್ದಾರೆ.ಕನ್ನಡ ಆಡು ಭಾಷೆಯಾಗಿರದೇ, ಶಿಕ್ಷಣದ, ಮಾಧ್ಯಮದ ಭಾಷೆಯಾಗಿರದೇ ಶೋಚನೀಯ ಸ್ಥಿತಿಯಲ್ಲಿದ್ದ ಕನ್ನಡಿಗರನ್ನು ಮುಕ್ತಗೊಳಿಸಿ ಒಂದುಗೂಡಿಸುವುದೇ ಕರ್ನಾಟಕದ ಏಕೀಕರಣದ ಚಳುವಳಿಗೆ ಮೂಲ ಕಾರಣವಾಯಿತು.ಕನ್ನಡದ ಕುಲ ಪುರೋಹಿತರೆಂದೇ ಖ್ಯಾತರಾಗಿದ್ದ ಆಲೂರು ವೆಂಕಟರಾಯರ ‘ಕರ್ನಾಟಕ ಗತವೈಭವ’ ಗ್ರಂಥದಿಂದ ಪ್ರಭಾವಿತಗೊಂಡು ಕನ್ನಡಿಗರು ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು, ಮೈಸೂರ್ ಪ್ರಾಂತ್ಯವಾಗಿದ್ದ ನಮ್ಮ ರಾಜ್ಯ ‘ವಿಶಾಲ ಕರ್ನಾಟಕ’ ರಾಜ್ಯವೆಂದು ಮಂತ್ರಿಗಳಾದ ದೇವರಾಜ್ ಅರಸ್ ಅವರ ನೇತೃತ್ವದಲ್ಲಿ ಮರು ನಾಮಕರಣಗೊಂಡು 50 ವರ್ಷಗಳೇ ಸಂದಿತು. ಕನ್ನಡಕ್ಕಾಗಿ ಸ್ವಾಭಿಮಾನಿ ಕನ್ನಡಿಗರ ಚಳುವಳಿ ಇಂದು ನಾವು ಕನ್ನಡ ತಾಯ ತೇರ ಎಳೆಯಲು ಅನುವು ಮಾಡಿಕೊಟ್ಟಿದೆ, ಹೆತ್ತ ತಾಯಿಯಂತೆ ಕನ್ನಡ ತಾಯಿ ಪೂಜ್ಯಳು, ಮಾನ್ಯಳು.ಅತೀ ಮಧುರ ಅಮ್ರ ರುಚಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಗಟ್ಟಾಗಿರೋಣವೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಎಸ್.ಡಿ.ಎಂ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಭಾಷೆಯೆಂದರೆ ಸಂಸ್ಕಾರ, ಹಾಗಾಗಿ ಜೀವನದಲ್ಲಿ ಮೌಲ್ಯ ತುಂಬಿದ ಗುಣಗಳು ವ್ಯಕ್ತಿಯನ್ನು ಸದೃಢಗೊಳಿಸುವುದು ಎಂದು ಕನ್ನಡ ಭಾಷೆ ಹಾಗೂ ಬದುಕಿನ ನಡೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತರಗತಿವಾರು ನಡೆಸಿದ ಕನ್ನಡ ಕುರಿತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.


ವಿದ್ಯಾರ್ಥಿಗಳು ನಾಡಗೀತೆ ಹಾಗೂ ಕನ್ನಡದ ಗೀತೆಗಳನ್ನು ಹಾಡಿದರು, ಕನ್ನಡ ಸ್ವರಚಿತ ಕವನಗಳನ್ನು ವಾಚಿಸಿದರು.
ಉಪ ಪ್ರಾಂಶುಪಾಲ ಮನೀಶ್ ಕುಮಾರ್, ಕಾಲೇಜಿನ ಸಾಂಸ್ಕೃತಿಕ ಹಾಗೂ ಸಾಹಿತಿಕ ಸಂಘದ ಸoಯೋಜನಾಧಿಕಾರಿ ಹಾಗೂ ಇಂಗ್ಲೀಷ್ ಉಪನ್ಯಾಸಕ ಪಾರ್ಶ್ವನಾಥ್, ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ಉಪಸ್ಥಿತರಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿ ಮಿಥುನ್ ಸ್ವಾಗತಿಸಿದರು.ದ್ವಿತೀಯ ವರ್ಷದ ವಿದ್ಯಾರ್ಥಿ ಅಕ್ಷಯ್ ವಂದಿಸಿದರು ಹಾಗೂ ಪೂರ್ವಿಕ್ ನಿರೂಪಿಸಿದರು.








