ಉಜಿರೆ: ಡಾ.ಪ್ರಶಾಂತ್ ಶೆಟ್ಟಿ ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೆಬ್ರಿಯ ಮಾಬ್ಳಿಯಲ್ಲಿ ಜನಿಸಿದರು.ಅಲ್ಲಿಯೆ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದರು.
1994ರಲ್ಲಿ ಉಜಿರೆ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಲ್ಲಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿ ಬಿ.ಎನ್.ವೈ.ಎಸ್. ಪದವಿ ಪಡೆದರು.
ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವೈದ್ಯಾಧಿಕಾರಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
2006ರಲ್ಲಿ ಬೆಂಗಳೂರಿನಲ್ಲಿ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.2014ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದರು.
ಪ್ರಸ್ತುತ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಟಾಸ್ಕ್ಫೋರ್ಸ್ ಸದಸ್ಯರಾಗಿ, ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹಾಗೂ ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯಲ್ಲಿ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಕರ್ನಾಟಕ ಸರ್ಕಾರದ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಸಲಹಾ ಮಂಡಳಿ ಸದಸ್ಯರಾಗಿ, ರಾಜೀವ್ ಗಾಂಧಿ ವಿ.ವಿ.ಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸೇವೆ, ಸಾಧನೆಯನ್ನು ಮನ್ನಿಸಿ, ಪ್ರಮುಖ ಶಿಕ್ಷಕರ ಪ್ರಶಸ್ತಿ, ಡಾ. ಬಿ.ಸಿ. ರಾಯ್ ರಾಷ್ಟ್ರ ಪ್ರಶಸ್ತಿ, ವಸಿಷ್ಠ ಪ್ರಶಸ್ತಿ, ಅತ್ಯುತ್ತಮ ಆಯುಷ್ ವೈದ್ಯ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.