

ಉಜಿರೆ: ಭಿನ್ನ ಸಾಮರ್ಥ್ಯದ ಮಕ್ಕಳು ದೇವರ ಮಕ್ಕಳು. ಅವರು ಎಲ್ಲರಿಗಿಂತ ಭಿನ್ನರು.ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಉಜಿರೆಯ ಸಾನಿಧ್ಯ ಸಂಸ್ಥೆ ನಿರ್ಮಾಣಗೊಂಡು ಸೇವೆ ಸಲ್ಲಿಸುತ್ತಿರುವುದು ಸಾವಿರಾರು ಜನರ ನೋವುಗಳನ್ನು ದೂರ ಮಾಡಲು ಕಾರಣವಾಗಿದೆ.ನಿಷ್ಠೆಯಿಂದ ನೀಡುವ ಮುಗುಳುನಗೆಯ ಸೇವೆ ದೇವರ ಅನುಗ್ರಹಕ್ಕೂ ಪಾತ್ರವಾಗುತ್ತದೆ ಹಾಗೂ ಪ್ರತಿಯೊಂದು ಕೂಡ ದೇವರ ನಿರ್ಧಾರದಂತೆ ನಡೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಅ.27ರಂದು ಉಜಿರೆಯಲ್ಲಿ ಎಂಡೋ ಸಂತ್ರಸ್ತರಿಗಾಗಿ ಇರುವ “ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ”ದಲ್ಲಿ ನಡೆದ ಮಕ್ಕಳ ಪೋಷಕರ ಹಾಗೂ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಎಂದೋ ಸಂತ್ರಸ್ತರದ್ದು ಕಾಯಿಲೆಯಲ್ಲ.
ಅದು ಮಾನವ ಸೃಷ್ಟಿಸಿದ ದುಷ್ಪರಿಣಾಮದಿಂದ ಉಂಟಾದ ಕಾಯಿಲೆ.ಭಿನ್ನ ಸಾಮರ್ಥ್ಯದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅಗತ್ಯ ಸವಲತ್ತು ಒದಗಿಸಲು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 1೦ಲಕ್ಷ ಅನುದಾನ ಒದಗಿಸಿದ್ದು ಮುಂದೆ ಇನ್ನಷ್ಟು ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.ಮಂಗಳೂರಿನ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಸ್ವಾವಲಂಬಿಗಳಾಗಲು ಪೋಷಕರ ಪಾತ್ರವು ಮಹತ್ವದ್ದು.

ಪೋಷಕರು ವಿಶೇಷ ಮಕ್ಕಳನ್ನು ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಸರಕಾರವು ಕಳೆದ ಮೂರು ತಿಂಗಳಿನಿಂದ ಸಂಸ್ಥೆಗೆ ಅನುದಾನ ಬಿಡುಗಡೆಗೊಳಿಸಿಲ್ಲ.
ಇದರ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಇನ್ನಷ್ಟು ಹೆಚ್ಚಿನ ನೆರವು ನೀಡಬೇಕಾದ ಅಗತ್ಯವಿದೆ ಎಂದರು.ಗಣೇಶ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ದೇವದತ್ತ ರಾವ್, ಜತೆ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ, ಗೌರವ ಸಲಹೆಗಾರ ಡಾ.ಪ್ರಮೋದ್ ಆರ್. ನಾಯಕ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಜಗದೀಶ ಶೆಟ್ಟಿ, ಉದ್ಯಮಿ ರೋಷನ್ ಸಿಕ್ವೇರ, ವಾಕ್ ತರಬೇತಿ ತಜ್ಞೆ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿ, ಫಿಸಿಯೋಥೆರಫಿಸ್ಟ್ ರುಬೀನಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಅಕ್ಷತಾ ವಂದಿಸಿದರು.