ಬೆಳ್ತಂಗಡಿ: ಪ್ರೊ.ಕೆ.ಎಸ್.ಭಗವಾನ್ ಅವರು ಒಕ್ಕಲಿಗರ ಸಮುದಾಯದವರು ಸಂಸ್ಕೃತಿ ಹೀನ ಪಶುಗಳು ಎಂಬ ಕುಚೋದ್ಯದ ಹೇಳಿಕೆಯನ್ನು ನೀಡಿ ಒಕ್ಕಲಿಗರ ಸಮುದಾಯವನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯ ಸಂಗತಿ. ಈ ಹೇಳಿಕೆಯು ಅವರ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆ. ಮತಿಭ್ರಮಣೆಗೊಂಡು ಆಡಿದ ಮಾತುಗಳು ಸಾಮಾಜಿಕ ದುಷ್ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಶ್ರೀ ಭಗವಾನ್‌ಗೆ ಇಲ್ಲದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹೇಳಿಕೆ ನೀಡಿದ್ದಾರೆ.
ನಮ್ಮ ದೇಶದ ಬೆನ್ನೆಲುಬು ರೈತ. ಸಮಸ್ತ ರೈತ ಸಮುದಾಯವನ್ನು ಒಕ್ಕಲಿಗ ಸಮುದಾಯ ಪ್ರತಿನಿಧಿಸುತ್ತದೆ. ಒಕ್ಕಲುತನ ಸಂಸ್ಕೃತಿಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಒಕ್ಕಲಿಗ ಸಮುದಾಯದವರು ಈ ದೇಶದ ಮಣ್ಣಿನ ಮಕ್ಕಳು.
ನಮ್ಮ ಸಮುದಾಯಕ್ಕೆ ಸೇರಿದ ದೇಶ ಕಂಡ ಮುತ್ಸದ್ಧಿ ಹಿರಿಯ ರಾಜಕಾರಣಿ, ಮಣ್ಣಿನ ಮಗ ದೇವೇಗೌಡರವರು ದೇಶದ ಪ್ರಧಾನ ಮಂತ್ರಿಯಾಗಿ ಈ ದೇಶದ ಕೀರ್ತಿಯನ್ನು ಹೆಚ್ಚಿಸಿದವರು, ವಿಶ್ವ ಮಾನವ ಸಂದೇಶವನ್ನು ಪ್ರಪಂಚಕ್ಕೆ ಸಾರಿದ ರಾಷ್ಟ್ರಕವಿ ಕುವೆಂಪುರವರು ಇದೇ ಸಮುದಾಯದವರು.
ಸಾಮಾಜಿಕ ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಹಾಗೂ ಆರ್ಥಿಕವಾಗಿ ಈ ಸಮುದಾಯ ದೇಶಕ್ಕೆ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದೆ ಮತ್ತು ನೀಡುತ್ತಿದೆ.ಭಗವಾನ್ ರವರ ಹೇಳಿಕೆಯು ಅಸಮರ್ಥನೀಯ ಅಸಂವಿಧಾನಿಕವಾಗಿದ್ದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘವು ಅವರ ಹೇಳಿಕೆಯನ್ನು ಖಂಡಿಸುತ್ತದೆ ಮತ್ತು ಸರ್ಕಾರವು ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಗ್ರಹಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.