ಬೆಳ್ತಂಗಡಿ: ಸ್ಯಾಕ್ಸೋಪೋನ್ ವಾದನ ಕ್ಷೇತ್ರದಲ್ಲಿ ಅತ್ಯುನ್ನತ ಕಲಾವಿದರಾಗಿ, ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಮಾನ್ಯತೆ ಪಡೆದು ರಾಜ್ಯದ ಅಗ್ರಮಾನ್ಯ ರಾಗಿ ಹೆಸರುವಾಸಿಯಾಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಅವರು ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುವುದಕ್ಕಾಗಿ ಮೂರನೇ ಬಾರಿಗೆ ಅಮೇರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಸುಜ್ಞಾನ ರಿಲಿಜಿಯಸ್ ಎಂಡ್ ಚಾರಿಟೇಬಲ್ ಫೌಂಡೇಶನ್ ಅರಿಝೋನಾ ಟೆಂಪಿ ಫೀನಿಕ್ಸ್ ಇಲ್ಲಿನ ಶ್ರೀ ವೆಂಕಟಕೃಷ್ಣ ದೇವಾಲಯದಲ್ಲಿ ಅ. 28 ರಿಂದ ನ.4 ರ ವರೆಗೆ ನಡೆಯುವ ‘ಶ್ರೀ ಯಜುರ್ವೇದ ಸಂಹಿತ ಯಾಗ’ ಮತ್ತು ‘ಸಹಸ್ರ ಅತರ್ವಶ್ರೀರ್ಶ ಮಹಾಗಣಪತಿ ಯಾಗ’ ಕಾರ್ಯಕ್ರಮದಲ್ಲಿ ಅವರು ಸಾಂಪ್ರದಾಯಿಕ ವಾದನ ನಡೆಸಿಕೊಡಲು ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದಾರೆ.
ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಅವರು ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿದ್ದು ಕಳೆದ 27 ವರ್ಷಗಳಿಂದ ಮುಂಬೈ, ಚೆನ್ನೈ, ದುಬಾಯಿ ಸಹಿತ ಹಲವು ರಾಜ್ಯಗಳಲ್ಲಿ ತಮ್ಮ ಪ್ರಬುದ್ದ ಕಲಾಗಾರಿಕೆ ಪ್ರದರ್ಶಿಸಿದ್ದಾರೆ.ಈ ಹಿಂದೆಯೂ ಅವರು ಎರಡು ಬಾರಿ ಅಮೆರಿಕಾದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಸಂಗೀತ ಕಾರ್ಯಕ್ರಮ, ಕೇಂದ್ರ ಸರಕಾರದ ಪ್ರಸಾರ ಭಾರತಿಯವರ ಪ್ರತಿಷ್ಠಿತ ಆಕಾಶವಾಣಿ ಸಂಗೀತ ಸಮ್ಮೇಳನ, ದೂರದರ್ಶನದ ‘ಪುದು ಗೈ ಇಸೈ ಮಾಲೈ’ ಕಾರ್ಯಕ್ರಮ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನೀಡಿರುವ ಅನುಭವಿಯಾಗಿದ್ದಾರೆ. ಪ್ರಸ್ತುತ ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಖ್ಯ ವಾದ್ಯ ವಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.