ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರೋಧಿಸಿ ಮತ್ತು ಸತ್ಯ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿಂದೂ ಪರ ಸಾಮಾಜಿಕ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಹರೀಶ್ ಪೂಂಜ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪೊಲೀಸ್ ಬಲದಿಂದ ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇಂತಹ ತುಷ್ಟೀಕರಣದ ರಾಜಕೀಯವನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಎಂದು ಹೇಳಿದರಲ್ಲದೆ ಪುನೀತ್ ಕೆರೆಹಳ್ಳಿಯವರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಗೆ ಪೂಂಜ ಮನವಿ: ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಇನ್ನಿತರ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ ಕಾಂಗ್ರೆಸ್ ಸರ್ಕಾರ ಕೂಡಲೇ ಪುನೀತ್ ಕೆರೆಹಳ್ಳಿ ಅವರ ವಿರುದ್ಧ ಹಾಕಿರುವ ಸುಳ್ಳು ಕೇಸ್ ಗಳನ್ನು ವಾಪಸ್ ಪಡೆಯಬೇಕು ಮತ್ತು ಸರ್ಕಾರ ಹಾಗೂ ರಾಜ್ಯದ ಪೊಲೀಸ್ ಇಲಾಖೆ ಆಮರಣಾಂತ ಉಪವಾಸ ಕೈಬಿಡುವಂತೆ ಪುನೀತ್ ಕೆರೆಹಳ್ಳಿಯವರನ್ನು ಮನವೊಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಹರೀಶ್ ಪೂಂಜ ಮನವಿ ಸಲ್ಲಿಸಿದ್ದಾರೆ.