ಧರ್ಮಸ್ಥಳ: ಏಕ ಬಳಕೆ ಪ್ಲಾಸ್ಟಿಕ್ ಮುಕ್ತನಗರ ಎಂದು ಫಲಕ ಅನಾವರಣದೊಂದಿಗೆ ಡಾ|ಹೆಗ್ಗಡೆಯವರಿಂದ ಘೋಷಣೆ

0

ಧರ್ಮಸ್ಥಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ಧರ್ಮಸ್ಥಳ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.ಅವರು ಅ.2ರಂದು ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಘೋಷಣಾ ಫಲಕ ಅನಾವರಣ ಮಾಡಿ ಅಧಿಕೃತ ಘೋಷಣೆ ಪ್ರಕಟಿಸಿದರು.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯೊಂದಿಗೆ ಅವರ ತತ್ವ, ಆದರ್ಶಗಳನ್ನು ನಾವು ಪಾಲಿಸಬೇಕು.

ಬೀದರ್, ಕಲಬುರ್ಗಿ, ಮಂಗಳೂರು, ಮೈಸೂರು ಮತ್ತು ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳನ್ನಾಗಿ ಮಾಡಲು ಆಯ್ಕೆ ಮಾಡಿದ್ದು ಧರ್ಮಸ್ಥಳ ಗ್ರಾಮ ಪಂಚಾಯಿತಿಯನ್ನು ಅಭಿನಂದಿಸಿ ಧರ್ಮಸ್ಥಳದ ಮೂಲಕ ಇಡಿ ಕರ್ನಾಟಕ ರಾಜ್ಯವೇ ದೇಶದ ಪ್ರಥಮ ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿರುವ ಧರ್ಮಸ್ಥಳದಲ್ಲಿ ಸ್ಥಳೀಯರು ಹಾಗೂ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆ ಬಗ್ಯೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಧರ್ಮಸ್ಥಳವು ದೇಶದ ಉತ್ತಮ ಸ್ವಚ್ಛ ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬ ಗೌರವಕ್ಕೆ ಪಾತ್ರವಾಗಿದ್ದು ಧರ್ಮಸ್ಥಳದಲ್ಲಿ ಬೀಡಿ, ಸಿಗರೇಟು, ಮದ್ಯ ಮಾರಾಟ ಇರುವುದಿಲ್ಲ. ಈಗಾಗಲೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.

ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಹಿರಿಯರು ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿ.ಎ.ಒ. ಪ್ರಸನ್ನಭಕ್ತ ಮಾತನಾಡಿ ಎಲ್ಲಾ ರಂಗಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ಇಂದು ಹೆಚ್ಚಾಗುತ್ತಿದ್ದು ಅದು ಭಸ್ಮಾಸುರನಂತೆ ಕಾಡುತ್ತಿದೆ. ವಿದ್ಯಾವಂತ ಹಾಗೂ ಪ್ರಜ್ಞಾವಂತ ನಾಗರಿಕರೆ ಪ್ರಕೃತಿಯನ್ನು ವಿಕೃತಿಗೊಳಿಸುತ್ತಿರುವುದು ಖೇದಕರವಾಗಿದೆ.

ಪಂಚಭೂತಗಳಿಂದ ಕೂಡಿದ ಪ್ರಶಾಂತವಾದ, ಸ್ವಚ್ಛ, ಸುಂದರ ಪ್ರಕೃತಿ-ಪರಿಸರವನ್ನು ಮುಂದಿನ ಜನಾಂಗಕ್ಕಾಗಿ ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ ಎಂದು ಅವರು ಹೇಳಿದರು.
ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲ ಉಪಸ್ಥಿತರಿದ್ದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಸ್ವಾಗತಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ವಂದಿಸಿದರು.

LEAVE A REPLY

Please enter your comment!
Please enter your name here