ಬೆಳ್ತಂಗಡಿ: ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2023 ಸಮೀಕ್ಷೆಯಲ್ಲಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಉತ್ತಮ ಸಾಧನೆ ಮಾಡಿರುವ ಕಾಶಿಪಟ್ಟ ಗ್ರಾಮ ಪಂಚಾಯತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಅ.2ರಂದು ಬೆಂಗಳೂರಿನ ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಉಪಸ್ಥಿತಿಯಲ್ಲಿ ನಡೆಯಲಿರುವ “ಗಾಂಧೀ ಗ್ರಾಮ ಪುರಸ್ಕಾರ” ಸಮಾರಂಭದಲ್ಲಿ ಕಾಶಿಪಟ್ಟ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ.ಬಂಗೇರ ಹಾಗೂ ಪಿಡಿಒ ಆಶಾಲತಾ ಅವರು ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2023’ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ.ಜಿಲ್ಲೆಯಿಂದ ಜಿಲ್ಲಾ ಎಸ್.ಬಿ.ಎಂ ನೋಡಲ್ ಅಧಿಕಾರಿಗಳು ಮತ್ತು ಒಬ್ಬರು ಜಿಲ್ಲಾ ಸಮಾಲೋಚಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಮಂತ್ರಾಲಯ ಇವರು ಸ್ವಚ್ಚಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2023 ಸಮೀಕ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ತಾಲೂಕು ಮಟ್ಟದ ಮೌಲ್ಯಮಾಪನದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರತಿ ಜಿಲ್ಲೆಯಿಂದ ಮೂರು ವರ್ಗಗಳಲ್ಲಿ ಒಟ್ಟು 269 ಗ್ರಾಮ ಪಂಚಾಯಿತಿಗಳನ್ನು ರಾಜ್ಯ ಮಟ್ಟಕ್ಕೆ ಆರಿಸಲಾಗಿದ್ದು, ಅದರಲ್ಲಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮ ಪಂಚಾಯತು ಆಯ್ಕೆಯಾಗಿದೆ.