ಬೆಳ್ತಂಗಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭೆ

0

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆಗಳ ಸಭೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಸೆ.24 ರಂದು ನಡೆಯಿತು.

ಸಭೆಯಲ್ಲಿ ದಸಂಸ ಮುಖಂಡ ವೆಂಕಣ್ಣ ಕೊಯ್ಯುರುರವರು ದಲಿತ ಕಾಲನಿ ಸಮೀಪ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನವಾಗಿದೆ.ಇದರಿಂದಾಗಿ ದಿನನಿತ್ಯ ದಲಿತ ಕಾಲನಿಗಳಲ್ಲಿ ಗಲಾಟೆ ನಡೆಯುತ್ತದೆ ಎಂದು ದೂರಿದ ಅವರು ಇಲಾಖೆಗಳು ಧಾಳಿ ನಡೆಸುವ ಮೊದಲೇ ಅಕ್ರಮ ದಂಧೆಕೋರರಿಗೆ ಮಾಹಿತಿ ನೀಡುವ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಈ ಬಗ್ಗೆ ಪೂರಕವಾಗಿ ಮಾತನಾಡಿದ ದಲಿತ ಮುಖಂಡರುಗಳು ಅಕ್ರಮ ದಂಧೆಕೋರರ ಬಗ್ಗೆ ಧ್ವನಿ ಎತ್ತುವವರ ಮಾಹಿತಿಯನ್ನು ಬಹಿರಂಗ ಪಡಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ರವರು ದಲಿತ ಕಾಲನಿ ಸೇರಿದಂತೆ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀಟ್ ಪೋಲಿಸರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ , ಇದರಿಂದಾಗಿ ಆಗಾಗ ಸಮಸ್ಯೆ ಉದ್ಭವಿಸುತ್ತದೆ. ಬೀಟ್ ಪೋಲಿಸರಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಮುಖಂಡರಾದ ಸಂಜೀವ ಆರ್ , ರಮೇಶ್ ಆರ್ , ಶೇಖರ್ ಲಾಯಿಲ ಆರೋಪಿಸಿದರು. ದಲಿತ ಕಾಲನಿಗಳ ಸಮೀಪ ಅಪರಿಚಿತರು ಹೆಣ್ಣು ಮಕ್ಕಳನ್ನು ಚುಡಾಯಿಸುವ ಗಂಭೀರ ಸ್ವರೂಪದ ಸಮಸ್ಯೆಗಳ ಬಗ್ಗೆ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಿಲ್ಲ ಎಂದು ಬಿ.ಕೆ ವಸಂತ ಆರೋಪಿಸಿದರು.ಈ ಬಗ್ಗೆ ಮಾತನಾಡಿದ ನಾಗೇಶ್ ಕದ್ರಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರರವರು ಮುಂದಿನ ದಿನಗಳಲ್ಲಿ ದಲಿತ ಕಾಲನಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ವ್ಯಕ್ತಿಯೊಬ್ಬರಿಗೆ ಜಮೀನು ಮಾರಾಟ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಆ. 29 ರಂದು ದೂರು ನೀಡಿದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ತಂಗಡಿ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಮಾನಸಿಕ ಅಸ್ವಸ್ಥರು , ಭಿಕ್ಷೆ ಬೇಡುವವರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಚಂದು ಎಲ್.ಗಮನ ಸೆಳೆದರು. ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವ , ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಬಗ್ಗೆ ಮಾಹಿತಿ ನೀಡಿ ತಕ್ಷಣ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ಭರವಸೆ ನೀಡಿದರು.

ಅಕ್ರಮ ಮರಳು ದಂಧೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ ಸ್ವಾಗತಿಸಿ , ಬಳಿಕ ಸಿಬ್ಬಂದಿ ಆನಂದ ವಂದಿಸಿದರು

p>

LEAVE A REPLY

Please enter your comment!
Please enter your name here