ಮಿತ್ತಬಾಗಿಲು ಗ್ರಾಮದ ಬಿ.ಕೆ.ದೇವ ರಾವ್ ರವರಿಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ರೈತ ಅಮೈ ಬಿ.ಕೆ.ದೇವ ರಾವ್ ಭತ್ತ ಹಾಗೂ ಇತರ ಹಲವಾರು ಕೃಷಿ ಸಂಬಂಧಿ ಸಸ್ಯಗಳ ನೂರಾರು ತಳಿಗಳನ್ನು ಸಂಗ್ರಹಿಸಿ, ಬೆಳೆಸಿರುವ ಇವರಿಗೆ ‘ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ’ 2020- 21 ಒಲಿದು ಬಂದಿದ್ದು ಸೆಪ್ಟೆಂಬರ್ 12ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ದೇಶದ 10, ರಾಜ್ಯದ ಇಬ್ಬರಿಗೆ ಈ ಪ್ರಶಸ್ತಿ ಸಿಕ್ಕಿದ್ದು ಅದು ಒಂದೂವರೆ ಲಕ್ಷ ರೂ.ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಹೊಂದಿದೆ.
ದೇಶದ ಹಲವಾರು ಜಾತಿಯ ಭತ್ತದ ತಳಿಗಳು ಇವರಲ್ಲಿದ್ದು ಕರ್ನಾಟಕದ 117, ಕೇರಳದ 25, ತಮಿಳುನಾಡಿನ 10, ಪಶ್ಚಿಮ ಬಂಗಾಳದ 5 ಮಹಾರಾಷ್ಟ್ರದ 2, ಆಂಧ್ರ,ಉತ್ತರ ಪ್ರದೇಶ, ಗುಜರಾತ್, ಛತ್ತಿಸ್ ಗಡ, ಮಣಿಪುರ, ದೆಹಲಿ,ಜಾರ್ಖಂಡ್, ಅಸ್ಸಾಂ,ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಹಲವಾರು ಭತ್ತದ ತಳಿಗಳು ಇವರ ಸಂಗ್ರಹದಲ್ಲಿದೆ.
ಇವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ತಂದೆಯ ಸಾಧನೆಗೆ ಬೆನ್ನೆಲುಬಾಗಿದ್ದು ಬೀಜ ಬ್ಯಾಂಕ್ ಸ್ಥಾಪಿಸಿ, ಬೇಡಿಕೆ ಇಡುವ ರೈತರಿಗೆ ತಮ್ಮ ತಂದೆಯ ಸಂಗ್ರಹದಲ್ಲಿರುವ ಭತ್ತದ ತಳಿಯ ಒಂದು ಮುಷ್ಟಿ ಭತ್ತ ನೀಡುವ ಯೋಜನೆ ಕೈಗೊಂಡಿದ್ದಾರೆ. ಒಂದು ಮುಷ್ಟಿ ಭತ್ತ ಒಯ್ಯುವ ರೈತ ಇದರ ಬೆಳೆ ಬೆಳೆದ ಬಳಿಕ ಎರಡು ಮುಷ್ಟಿ ಭತ್ತವನ್ನು ಇವರಿಗೆ ನೀಡಬೇಕು. ಇದರಿಂದ ಭತ್ತದ ತಳಿಗಳು ಹೆಚ್ಚು ಕಡೆ ಬೆಳೆಯಲು ಹಾಗೂ ಬೇಡಿಕೆ ಸಲ್ಲಿಸುವವರಿಗೆಲ್ಲ ನೀಡಲು ಸಹಕಾರಿಯಾಗುತ್ತದೆ.

ಇವರ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ 2017ರಲ್ಲಿ ರಾಷ್ಟ್ರಪತಿ ಭವನದಲ್ಲಿ ಸೃಷ್ಟಿ ಸಮ್ಮಾನ್, 2018ರಲ್ಲಿ ವಿಕ ಸೂಪರ್ ಸ್ಟಾರ್ ರೈತ, 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇರಳದಲ್ಲಿ ವೀಕ್ ಆಫ್ ದಿ ರೈಸ್ ಆಕ್ಷನ್ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ. 50ಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳು ಇವರ ವಿಶಿಷ್ಟ ಸಾಧನೆಯನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.

LEAVE A REPLY

Please enter your comment!
Please enter your name here