ಉಜಿರೆ: ಆಗಸ್ಟ್ 30 ರಂದು ಶಾಲಾ ಶಿಕ್ಷಣ ಮತ್ತು ದ.ಕ.ಜಿ.ಪಂಚಾಯಿತಿ (ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ ಹಾಗೂ ಶ್ರೀ.ಧ.ಮಂ.ಅ.ಸೆಕೆಂಡರಿ ಶಾಲೆ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.ಬೆಳ್ತಂಗಡಿ ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿಗಳಾದ ಸುಜಯ ರವರು ಪ್ರಾಸ್ತಾವಿಕ ನುಡಿಯೊಂದಿಗೆ ಮಾತನಾಡಿ “ಈ ನೆಲ ಯೋಗಾಸನದ ಮೂಲ.”ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಏಕಾಗ್ರತೆ ಹಾಗೂ ಆರೋಗ್ಯ ವರ್ಧನೆಗೆ ಯೋಗ ಅತಿ ಅಗತ್ಯ” ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀ.ಧ.ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.”ಪುರಾಣ ಕಾಲದಿಂದಲೂ ಯೋಗ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ದೇಹ ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ರವರು ಆಗಮಿಸಿ ಮಾತನಾಡಿ, ಯೋಗ ಪ್ರಾಚೀನ ಭಾರತದ ಕಲೆ.”ಮೊದಲು ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಆದ್ಯತೆ ಪಡೆದು ಈಗ ಆಧುನಿಕ ಶಿಕ್ಷಣದ ಭಾಗವಾಗಿ ಪ್ರಾಮುಖ್ಯತೆ ಪಡೆದಿದೆ” ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ರವರು ಮಾತನಾಡಿ, “ಯೋಗ ಪ್ರಕೃತಿ ಮತ್ತು ಮನುಷ್ಯನ ನಡುವೆ ಉತ್ತಮ ಸ್ವಾಸ್ಥ್ಯ ಕಲ್ಪಿಸುವಲ್ಲಿ ಸಹಕಾರಿಯಾಗಿದೆ” ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಬಿ.ಸೋಮಶೇಖರ್ ಶೆಟ್ಟಿ ರವರು ಕಾರ್ಯಕ್ರಮದ ಪೂರ್ವಭಾವಿ ಸಭೆಗಳನ್ನು ನಡೆಸಿ ಮಾರ್ಗದರ್ಶನ ನೀಡಿದ್ದು,ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಯರಾದ ಸುರೇಶ್. ಕೆ ಸ್ವಾಗತ ಭಾಷಣ ಮಾಡಿದರು.ಬೆಳ್ತಂಗಡಿ ಕ್ಷೇತ್ರ ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಶ್ರೀ.ಧ.ಮ.ಶಿಕ್ಷಣ ಸಂಸ್ಥೆಯ ಸ್ಪೋರ್ಟ್ಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್, ರಾಷ್ಟ್ರೀಯ ಯೋಗ ತೀರ್ಪುಗಾರರಾದ ಶೇಖರ್ ಕಡ್ತಾಳ್ ಹಾಗೂ ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೃಷ್ಣಾನಂದ ಬೆಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ.ಬಿ ಧನ್ಯವಾದ ಸಮರ್ಪಿಸಿದರು.ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.