ಬಳಂಜ: ಪೆರಾಜೆ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ಮರದ ದಿಮ್ಮಿಗಳು- ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ

0

ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಪೆರಾಜೆ, ತೆಂಕಕಾರಂದೂರು ಸಂಪರ್ಕಿಸುವ ಹಾಗೂ ಕೊಂಗುಳ ಹಚ್ಚಾಡಿ, ವೇಣೂರು ಸಂಪರ್ಕಿಸುವ ಫಲ್ಗುಣಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ಸುರಿದ ಮಳೆಗೆ ಕಿಂಡಿ ಅಣೆಕಟ್ಟಿನ ತಳ ಭಾಗದಲ್ಲಿ ಅಪಾರ ಪ್ರಮಾಣದ ಮರದ ದಿಮ್ಮಿಗಳು ಹಾಗೂ ಕಸ ಕಡ್ಡಿಗಳು ತುಂಬಿ ಕೊಂಡಿದ್ದು ಇದರಲ್ಲಿರುವ ಕಿರು ಸೇತುವೆಗಳಿಗೆ ಹಾನಿಯಾಗಿದೆ.ಗ್ರಾಮೀಣ ಭಾಗದ ಜನರು ಹಾಗೂ ಶಾಲಾ ಮಕ್ಕಳು ಈ ಸೇತುವೆಗಳನ್ನೇ ಆಶ್ರಯಿಸಿ ತಾಲೂಕು ಕೇಂದ್ರಗಳಿಗೆ ಹೋಗಬೇಕಾಗಿದ್ದು ಮರದ ದಿಮ್ಮಿಗಳನ್ನು ತಕ್ಷಣವೇ ತೆರವುಗೊಳಿಸದಿದ್ದರೆ ನೀರಿನ ಒತ್ತಡಕ್ಕೆ ಸೇತುವೆ ಕುಸಿಯುವ ಸಾಧ್ಯತೆಯಿದೆ.ಈ ಕುರಿತು ಸ್ಥಳೀಯ ಸಮಾಜ ಸೇವಕರಾದ ಬಿ.ಪ್ರಮೋದ್ ಕುಮಾರ್ ಜೈನ್ ರವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಬಳಂಜ ಗ್ರಾಮ ಸಭೆಗಳಲ್ಲೂ ಮನವಿಯನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಒಂದು ವಾರದ ಒಳಗೆ ತೆರವುಗೊಳಿಸುತ್ತೇವೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಂದ ಸ್ಪಷ್ಟನೆ: ಈ ಕುರಿತು ಸುದ್ದಿ ಪ್ರತಿನಿಧಿ ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿದಾಗ,ವಿಷಯ ನಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ಈಗಾಗಲೇ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವ ಜಲಾನಯನ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದು ಸೇತುವೆಯ ಅಗಲೀಕರಣಕ್ಕೂ ಮನವಿ ಮಾಡಲಾಗಿದೆ.ಅವರು ಕ್ರಮ ಕೈಗೊಳ್ಳದೇ ಇದ್ದರೆ ಪಂಚಾಯತ್ ಮೂಲಕ ಸರಿ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಶೋಧರ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಬಳಂಜದ ಪೆರಾಜೆ ಮತ್ತು ಕೊಂಗುಳ ಎರಡು ಅಣೆಕಟ್ಟಿನಲ್ಲಿ ಇಂತಹ ಸಮಸ್ಯೆ ಇದ್ದು ಪಂಚಾಯತ್ ಕಾರ್ಯದರ್ಶಿಯವರ ಗಮನಕ್ಕೆ ತಂದು ಒಂದು ವಾರದ ಒಳಗೆ ಮರದ ದಿಮ್ಮಿಗಳನ್ನು ತೆರವುಗೊಳಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೇತುವೆ ಅಪಾಯಕ್ಕೆ ಸಿಲುಕುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಹಾಗೂ ಶಾಲಾ ಮಕ್ಕಳ ಸುರಕ್ಷತೆಗಾಗಿ ಸೇತುವೆಯ ಎರಡು ಬದಿಗಳಲ್ಲಿ ತಡೆ ಗೋಡೆಯನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here