ವೇಣೂರು: ಶ್ರೀ ಧ.ಮಂ.ಕೈಗಾರಿಕಾ ತರಬೇತಿ ಸಂಸ್ಥೆ, ವೇಣೂರಿನಲ್ಲಿ ತರಬೇತಿ ಪೂರ್ಣಗೊಳಿಸಿದ ತರಬೇತಿದಾರರ Convocation Ceremony ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭ ಜು.15ರಂದು ಐಟಿಐಯಲ್ಲಿ ನಡೆಯಿತು.ಇತರ ಶಿಕ್ಷಣ ಸಂಸ್ಥೆಗಳಲ್ಲಿ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರೆ ವೇಣೂರಿನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೇ ಕಂಪನಿಗಳನ್ನು ಆಯ್ಕೆ ಮಾಡುವಂತಹ ಅವಕಾಶ ಸಿಕ್ಕಿರುವುದು ಈ ಸಂಸ್ಥೆಯ ಹಿರಿಮೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಮುಖ್ಯ ಅಧಿಕಾರಿ ಬಿ.ಸೋಮಶೇಖರ್ ಶೆಟ್ಟಿ ಮಾತನಾಡುತ್ತಾ ಉತ್ತಮ ಕೌಶಲ್ಯದೊಂದಿಗೆ ನಿರಂತರ ಶಿಸ್ತನ್ನು ಮೈಗೂಡಿಸಿಕೊಂಡು ಇರುವುದರಿಂದ ವೇಣೂರು ಐಟಿಐ ಇಂದು ರಾಜ್ಯದಲ್ಲೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ್ ಜೈನ್ ಮಾತನಾಡಿ ವಿದ್ಯಾರ್ಥಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ವಿದ್ಯಾರ್ಥಿಗಳನ್ನು ಹಾರೈಸಿದರು.ತರಬೇತಿ ಅಧಿಕಾರಿ ಪೀಟರ್ ಸಿಕ್ವೇರಾ ಹಾಗೂ ಕಚೇರಿ ಅಧೀಕ್ಷಕ ಉಮೇಶ್ ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿದಾರ ಕಿಶೋರ್ ಕುಮಾರ್ ಮತ್ತು ಕ್ರಿಸ್ಟನ್ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.ಸಿಬ್ಬಂದಿಗಳ ಪರವಾಗಿ ಕಿರಿಯ ತರಬೇತಿ ಅಧಿಕಾರಿ ರತ್ನಾಕರ್ ರಾವ್ ಎಚ್. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ತರಬೇತಿ ಸಮಯದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ತರಬೇತಿ ಪೂರ್ಣ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಎಂ.ಎಂ.ವಿ. ವಿಭಾಗದ ವಿದ್ಯಾರ್ಥಿ ನಿಖಿತ್ ಪ್ರಾರ್ಥನೆಗೈದು, ಕಿರಿಯ ತರಬೇತಿ ಅಧಿಕಾರಿಗಳಾದ ಪದ್ಮಪ್ರಸಾದ್ ಬಸ್ತಿ ನಿರೂಪಿಸಿ, ಸತೀಶ್ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.