ಮಡಂತ್ಯಾರು: “ತಾಯ್ತನದ ಭಾವವನ್ನು ಅನುಭವಿಸಿವುದಕ್ಕೆ ಹೆರಬೇಕಾಗಿಲ್ಲ, ಪೊರೆಯುವ ಗುಣವೊಂದಿದ್ದರೆ ಸಾಕು, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕೇ ಹೊರತು, ಒತ್ತಡದಿಂದ ಅಲ್ಲ ” ಎಂಬುದಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ.ಎನ್.ಎಂ.ಜೋಸೆಫ್ ನುಡಿದರು.
ಅವರು ಸೇಕ್ರೆಡ್ ಹಾರ್ಟ್ ಸಭಾಂಗಣದಲ್ಲಿ ಜುಲೈ 11 ರಂದು ನಡೆದ ಕಾಲೇಜಿನ ಶಿಕ್ಷಕ-ರಕ್ಷಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆವರೆಂಡ್ ಡಾಕ್ಟರ್ ಸ್ಟ್ಯಾನಿ ಗೋವಿಯಸ್ ಅವರು ಮಾತನಾಡುತ್ತಾ “ಸಂಸ್ಥೆಯ ಮೇಲೆ ನಂಬಿಕೆಯಿಟ್ಟು ಮಕ್ಕಳನ್ನು ವಿದ್ಯಾರ್ಜನೆಗೆ ಕಳುಹಿಸಿದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆಯು ಶ್ರಮಿಸುವುದು” ಎಂಬ ಭರವಸೆಯನ್ನು ಪೋಷಕರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ 23-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಅಧ್ಯಕ್ಷರಾಗಿ ಶ್ರೀ ಜೋಸೆಫ್ ಕೆ ಜೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಶೈಲಾ ಜಾರ್ಜ್ ಸರ್ವಾನುಮತದಿಂದ ಆಯ್ಕೆಯಾದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ್ ಶೆಟ್ಟಿ, ಕಾರ್ಯದರ್ಶಿ ಪ್ರೊ ಈಶ್ವರ ಗೌಡ ಕೋಶಾಧಿಕಾರಿ ಶ್ರೀಮತಿ ಪ್ರೀತಿ ಡಿ’ಸೋಜ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಪ್ರೊ ನೆಲ್ಸನ್ ಮೋನಿಸ್ ನಡೆಸಿಕೊಟ್ಟರು. ಪ್ರೊ ಈಶ್ವರ ಗೌಡ ಅವರು ಸ್ವಾಗತಿಸಿದರು. ಉಪನ್ಯಾಸಕಿ ರಾಜೇಶ್ವರಿ. ಎಂ ಮತ್ತು ಡಾ ಲತಾ ನಿರೂಪಿಸಿದರು.