ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಕಟ್ಟೆ ಅಂಗನವಾಡಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಕೊಡಮಾಡುವ ಪೌಷ್ಟಿಕ ಆಹಾರ ಮೊಟ್ಟೆಯಲ್ಲಿ ಬೇಯಿಸಿದಾಗ ಮರಿ ಪತ್ತೆಯಾಗಿ ಗುಣಮಟ್ಟದ ಪೌಷ್ಟಿಕತೆಯಲ್ಲೊಂದು ಅಪೌಷ್ಟಿಕತೆ ಸೃಷ್ಟಿಸಿದ ಪ್ರಕರಣವೊಂದು ಅರಸಿನಮಕ್ಕಿ ಭಾಗದಿಂದ ವರದಿಯಾಗಿದೆ.
ಕಳೆದ ಕೆಲ ವರ್ಷಗಳಿಂದ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ,ದವಸ ಧಾನ್ಯಗಳನ್ನು ಅಂಗನವಾಡಿ ಮೂಲಕ ಎಲ್ಲಾ ಮನೆಗಳಿಗೂ ತಲುಪಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅಪೌಷ್ಟಿಕತೆ ನೀಗಿಸುವ ಸರ್ಕಾರದ ಉತ್ತಮ ಕಾರ್ಯದಿಂದ ಬೆಳೆಯುವ ಮಕ್ಕಳು ಪೌಷ್ಟಿಕವಾಗಿ ಬೆಳೆಯುತ್ತಾರೆ ಎನ್ನುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವುದರೊಂದಿಗೆ, ಇದೆಲ್ಲದರ ಲೆಕ್ಕಾಚಾರ, ವಿತರಣೆ ಹೊಣೆ ಅಂಗನವಾಡಿ ಕಾರ್ಯಕರ್ತೆಯರ ಮೇಲಿತ್ತು.ಅಂತೆಯೇ ಒಂದೆರಡು ದಿನಗಳ ಹಿಂದೆ ರೆಖ್ಯ ಗ್ರಾಮದ ಎಂಜಿರ-ಕಟ್ಟೆ ಅಂಗನವಾಡಿ ಕೇಂದ್ರದಿಂದ ವಿತರಣೆಯಾಗಿದ್ದ ಮೊಟ್ಟೆಯನ್ನು ಪಡೆದುಕೊಂಡಿದ್ದ ಮಗುವಿನ ಮನೆಯಲ್ಲಿ ಆತಂಕ ಮೂಡಿತ್ತು.
ಸರ್ಕಾರದಿಂದ ಸಿಗಬೇಕಿದ್ದ ಗುಣಮಟ್ಟದ ಮೊಟ್ಟೆ ಇಲ್ಲಿ ಕಳಪೆಯಾಗಿದ್ದು, ಬೇಯಿಸಿದಾಗ ಮೊಟ್ಟೆಯೊಳಗೆ ಹೆಪ್ಪುಗಟ್ಟಿದ ರಕ್ತ, ಅದಾಗಲೇ ಹೊರಬರಬೇಕಿದ್ದ ಮರಿ ಎಲ್ಲವೂ ಬೆಂದು ಹೋಗಿತ್ತು.ಸದ್ಯ ಈ ಸುದ್ದಿ ಇಡೀ ಗ್ರಾಮದಲ್ಲಿ ಸಂಚರಿಸಿದ್ದು, ಈ ಬಾರಿ ಮೊಟ್ಟೆ ಪಡೆದುಕೊಂಡಿದ್ದ ಪ್ರತೀ ಮನೆಯಲ್ಲೂ ಗುಣಮಟ್ಟ, ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಬಿತ್ತು. ಈ ವಿಚಾರ ವಾರ್ಡ್ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮುಂದಿನ ಗ್ರಾಮ ಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಟ್ಟೆಯೊಳಗೆ ಬೆಂದು ಹೋದ ಮರಿಯ ಫೋಟೋ ಸಹಿತ ವರದಿಯಾಗಿದೆ.