ಗ್ಯಾರಂಟಿಗಳೆಲ್ಲಾ ಸರಕಾರ ರಚನೆಯಾದ ಮೇಲೆ ಹೊಸ ಹೊಸ ರೂಪ ಪಡೆಯತೊಡಗಿದ್ದು, ಜನರು ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ- ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್ ಪತ್ರಿಕಾ ಹೇಳಿಕೆ

0

ಬೆಳ್ತಂಗಡಿ: ಅಧಿಕಾರಕ್ಕೆ ಬರುವ ಮೊದಲು ನೀಡಿದ ಗ್ಯಾರಂಟಿಗಳೆಲ್ಲಾ ಸರಕಾರ ರಚನೆಯಾದ ಮೇಲೆ ಹೊಸ ಹೊಸ ರೂಪ ಪಡೆಯತೊಡಗಿದ್ದು ಯೋಜನೆಗಳ ಬಗ್ಗೆ ಭ್ರಮನಿರಸನವಾಗುತ್ತಿದ್ದು, ಜನರು ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.ಇದೇ ರೀತಿ ಮುಂದುವರಿದರೆ ಈ ಸರಕಾರ ಹೆಚ್ಚು ದಿನ ಉಳಿಯಲಾರದು ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಗ್ಯಾರಂಟಿಗಳಿಗೆ ಯಾವುದೇ ಷರತ್ತುಗಳಿಲ್ಲ ಎಂದು ಜನರು ಭಾವಿಸಿ ಕಾಂಗ್ರೇಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆದರೆ ಈಗ ಇವರ ನೀತಿ ನಿಯಮಗಳ ಬಗ್ಗೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ರೀತಿಗಳನ್ನು ನೋಡಿದರೆ ಜನರು ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಚರ್ಚೆ, ಚಿಂತನೆಗಳಿಲ್ಲದೆ, ಯಾವುದೇ ಸಿದ್ಧತೆಗಳನ್ನು ಮಾಡದೆ ಆತುರವಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನರನ್ನು ಯಾಮಾರಿಸುವಂತಿವೆ ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆ, ನಿರುದ್ಯೋಗ ಭತ್ತೆಯ ಗೊಂದಲ ನಿವಾರಣೆ ಮಾಡುವ ಬದಲು ಇವರು ಅಕ್ಕಿ ಕೇಂದ್ರ ಸರಕಾರ ನೀಡುತ್ತಿಲ್ಲವೆಂದು ಅವಲತ್ತುಕೊಂಡಿದ್ದಾರೆ. ಕೇಂದ್ರವು ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡಬೇಕಾದ ಐದು ಕೆಜಿ ಅಕ್ಕಿಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತದೆ. ರಾಜ್ಯ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಹಪಾಹಪಿಯಲ್ಲಿ ನೀಡಿದ ಹತ್ತು ಕೆಜಿಗೆ ಕೇಂದ್ರ ಸರಕಾರ ಹೇಗೆ ಜವಾಬ್ದಾರಿ ಆಗುತ್ತದೆ? ಕೇಂದ್ರ ಒಂದು ವೇಳೆ ಐದು ಕೆ ಜಿ ನೀಡಲು ಸಿದ್ಧರಿದ್ದರೂ ಅದನ್ನು ಮಾರುಕಟ್ಟೆ ದರವನ್ನು ನೀಡಿಯೇ ಖರೀದಿಸಬೇಕಾಗುತ್ತದೆ.ಹೀಗಾಗಿ ಅಕ್ಕಿ ಸಿಗದಿದ್ದರೆ ಬಿಪಿಎಲ್‌ ಪಡಿತರ ಚೀಟಿಯವರಿಗೆ ಅಕ್ಕಿಯ ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲು ಅವಕಾಶವಿದೆ. ಖಾತೆಗೆ ಜಮೆಯಾದ ಹಣದಿಂದ ಅವರು ಅಕ್ಕಿ ಕೊಂಡುಕೊಳ್ಳುತ್ತಾರೆ. ಅಕ್ಕಿ ಸಂಗ್ರಹವಾಗುವವರೆಗೆ ಖಾತೆಗೆ ಹಣ ಹಾಕುವುದು ಮಾಡಬಹುದಾಗಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಬರ, ನೆರೆ ಇತ್ಯಾದಿಗಳನ್ನು ಬಂದಾಗ ಜನರಿಗೆ ಆಹಾರ ಧಾನ್ಯಗಳನ್ನು ತುರ್ತಾಗಿ ನೀಡಬೇಕಾಗುತ್ತದೆ. ಅಲ್ಲದೆ ಬೆಲೆಯ ಸ್ಥಿರತೆಯನ್ನೂ ಕಾಪಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕೇಂದ್ರವು ಅದಕ್ಕಾಗಿ ನೀತಿಯೊಂದನ್ನು ಮಾಡಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಏಕಾಏಕಿ ಕೇಂದ್ರ ಸರಕಾರವನ್ನು ಟೀಕಿಸುವುದು ಸರಿಯಲ್ಲ. ಅದಲ್ಲದೆ ರಾಜ್ಯದಲ್ಲಿರುವ ರೈಸ್‌ಮಿಲ್‌ಗಳಿಂದ ಅಕ್ಕಿ ಖರೀದಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಇನ್ನು ಮತಾಂತರ ನಿಷೇಧ ಕಾಯಿದೆಯನ್ನು ವಾಪಸು ತೆಗೆದುಕೊಂಡಿರುವ ನಿರ್ಧಾರ ಅಲ್ಪಸಂಖ್ಯಾತರ ತುಷ್ಟೀಕರಣದ ಒಂದು ಭಾಗವಾಗಿದೆ. ಇದು ಕಾಂಗ್ರೇಸ್‌ನ ಹಳೇ ಚಾಳಿಯಾಗಿದ್ದು ಈಗಲೂ ಮುಂದುವರಿದಿದೆ. ಇನ್ನೊಂದೆಡೆ ಪಠ್ಯಪುಸ್ತಕಗಳಲ್ಲಿನ ಪಾಠಗಳ ಮಾರ್ಪಾಡು ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿದ್ಯುತ್‌ದರ ಏರಿಕೆಯ ಬಿಸಿಕೂಡ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದ ಸಣ್ಣ ಕೈಗಾರಿಕೆಗಳು ಆತಂಕದ ಸ್ಥಿತಿಯಲ್ಲಿವೆ. ವಿದ್ಯುತ್‌ ನಿಗದಿತ ಶುಲ್ಕವನ್ನು ಹೆಚ್ಚಿಸಿರುವುದು, ಸ್ಲಾಬ್‌ ತೆಗೆದಿರುವುದು, ಯುನಿಟ್‌ಗೆ ವಿದ್ಯುತ್‌ದರ ಹೆಚ್ಚು ಮಾಡಿರುವುದನ್ನು ನೋಡಿದರೆ ರಾಜ್ಯ ಸರಕಾರಕ್ಕೆ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡತೊಡಗಿದೆ. ಈ ಉಚಿತ ಯೋಜನೆಗಳೆಲ್ಲಾ ಸರಕಾರದ ಬೊಕ್ಕಸವನ್ನು ಬರಿದು ಮಾಡಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಇದು ಜನರಿಗೆ ಈಗಾಗಲೇ ಅರಿವಾಗಿದ್ದು ಜನರೇ ಟೀಕೆ ಮಾಡಲು ಪ್ರಾರಂಭ ಮಾಡತೊಡಗಿದ್ದಾರೆ.ಈ ಸರಕಾರದ ವೇಗವನ್ನು ನೋಡಿದರೆ ಬಹುಶಃ ಇವರ ಆಡಳಿತ ಹೆಚ್ಚು ಕಾಲ ಇರಲಾರದು ಎಂದು ಕಾಂಗ್ರೇಸ್‌ ಪಕ್ಷಕ್ಕೇ ಅನಿಸಿದೆಯೋ ಎಂಬಂತೆ ಭಾಸವಾಗುತ್ತಿದೆ. ಜು.3 ರಿಂದ ನಡೆಯುವ ಅಧಿವೇಶನದಲ್ಲಿ ಸರಕಾರದ ನಿಲುವುಗಳನ್ನು ಮತ್ತು ವೈಫಲ್ಯಗಳನ್ನು ಭಾರತೀಯ ಜನತಾ ಪಕ್ಷ ಎತ್ತಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here