ರಾಷ್ಟ್ರೀಯ ಹೆದ್ದಾರಿ ಉಜಿರೆಯಲ್ಲಿ ರಸ್ತೆಯಲ್ಲಿ ಹರಿದ ಮಳೆ ನೀರು- ಪರದಾಡಿದ ವಾಹನ ಸವಾರರು

0

ಉಜಿರೆ: ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ-ಬೆಳ್ತಂಗಡಿ ರಸ್ತೆಯ ಸೆಕೆಂಡರಿ ಶಾಲೆಯಿಂದ ಬೆನಕ ಆಸ್ಪತ್ರೆ ತನಕದ ಸುಮಾರು 500 ಮೀ. ವ್ಯಾಪ್ತಿಯ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸವಾರರು ಪರದಾಟ ನಡೆಸಿದರು.
ಅಗಲ ಕಿರಿದಾದ ಈ ರಸ್ತೆಯ ಇಕ್ಕೆಲಗಳಲ್ಲೂ ಇರುವ ಚರಂಡಿಗಳು ಸಂಪೂರ್ಣ ಮುಚ್ಚಿದ್ದು ಮಳೆ ನೀರು ಸುಮಾರು ಒಂದೂವರೆ ಅಡಿಗಿಂತ ಹೆಚ್ಚು ರಸ್ತೆ ಮೂಲಕವೇ ಹರಿಯಿತು. ರಸ್ತೆಯ ಎರಡು ಬದಿಯ ಅಂಗಡಿಗಳ ಮುಂಭಾಗದವರೆಗೂ ನೀರು ನುಗ್ಗಿತು. ನೀರು ರಸ್ತೆಯಲ್ಲೇ ಹರಿದ ಕಾರಣ ಪಾದಾಚಾರಿಗಳಿಗು ಸಂಚರಿಸಲು ಅಸಾಧ್ಯವಾಯಿತು. ಸುಮಾರು ಒಂದು ತಾಸಿನ ಬಳಿಕ ನೀರು ಇಳಿಕೆಯಾಯಿತು. ಅಂಗಡಿಗಳ ಮುಂಭಾಗ
ಮಳೆ ನೀರಿನೊಂದಿಗೆ ಹರಿದು ಬಂದ ಸಾಕಷ್ಟು ಪ್ಲಾಸ್ಟಿಕ್,ತ್ಯಾಜ್ಯವು ಜಮೆಯಾಯಿತು.
ಮುಗಿಯದ ಗೋಳು: ಈ ರಸ್ತೆ ಪ್ರದೇಶದಲ್ಲಿ ಮಳೆ ನೀರು ಹರಿಯುವುದು ಮುಗಿಯದ ಸಮಸ್ಯೆಯಾಗಿದೆ. ಕಳೆದ ವರ್ಷವೂ ಮಳೆಗಾಲದಲ್ಲಿ ಹಲವು ಬಾರಿ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು,ಅಂಗಡಿ ಮಾಲಕರು, ಪಾದಾಚಾರಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದರು. ಪಂಚಾಯಿತಿ ಮೂಲಕ ಆಗಾಗ ಕಾಮಗಾರಿ ನಿರ್ವಹಿಸಲಾಗಿತ್ತು ಆದರೆ ಸಮಸ್ಯೆ ಮತ್ತೆ ಮುಂದುವರಿಯುತ್ತಿತ್ತು.
ರಸ್ತೆ ಚರಂಡಿಗಳಲ್ಲಿ ತಂದು ಹಾಕುವ ತ್ಯಾಜ್ಯ,ಪ್ಲಾಸ್ಟಿಕ್,ಗೋಣಿಕಟ್ಟುಗಳಿಂದ ಮಳೆ ನೀರು ಸರಾಗವಾಗಿ ಹರಿಯಲು ಸಮಸ್ಯೆ ಉಂಟಾಗುತ್ತಿದೆ ಹಾಗೂ ಸಕಾಲಕ್ಕೆ ಚರಂಡಿಗಳನ್ನು ದುರಸ್ತಿ ಮಾಡದಿರುವುದು ಪ್ರಮುಖ ಕಾರಣವಾಗಿದೆ ಇಲ್ಲಿನ ಚರಂಡಿಗಳಲ್ಲಿ ಭಾರಿ ಪ್ರಮಾಣದ ಗಿಡಗಂಟಿಗಳು ಬೆಳೆದಿದ್ದು ಅವು ಕೂಡ ನೀರು ಹರಿಯಲು ಅಡ್ಡಿಯಾಗಿ ನೀರು ರಸ್ತೆಗೆ ನುಗ್ಗುತ್ತಿದೆ.


ಸಭೆಗಳಲ್ಲಿ ಚರ್ಚೆ: ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಜರಗಿದ ಮುಂಗಾರುಪೂರ್ವ ಸಿದ್ಧತೆ ಸಭೆಯಲ್ಲಿ ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಉಜಿರೆ ಪ್ರದೇಶದ ರಸ್ತೆಗಳಲ್ಲಿ ಮಳೆ ನೀರು ಹರಿದು ಉಂಟಾಗುತ್ತಿರುವ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿಲ್ಲದ ಕಾರಣ ಇದರ ಬಗ್ಗೆ ಎಚ್ಚೆತ್ತುಕೊಳ್ಳದ ಇಲಾಖೆ ಇಲ್ಲಿನ ಚರಂಡಿ ದುರಸ್ತಿಗೆ ಮುಂದಾಗಿರಲಿಲ್ಲ. ಈ ಕಾರಣದಿಂದ ಮಳೆಗಾಲ ಆರಂಭಕ್ಕೆ ಭಾರಿ ಸಮಸ್ಯೆ ಎದುರಾಯಿತು. ಕಳೆದ ವಾರ ನಡೆದ ಉಜಿರ ಪಂಚಾಯಿತಿ ಗ್ರಾಮ ಸಭೆಯಲ್ಲಿ ರಸ್ತೆಯಲ್ಲಿ ನೀರು ಹರಿಯುವ ವಿಚಾರ ತೀವ್ರ ಚರ್ಚೆಗೆ ಒಳಗಾಗಿತ್ತು.
ಚರಂಡಿ ದುರಸ್ತಿ ಅಗತ್ಯ: ಉಜಿರೆ ಸೇರಿದಂತೆ ತಾಲೂಕಿನ ಎಲ್ಲಾ ರಸ್ತೆಗಳ ಚರಂಡಿ ದುರಸ್ತಿ ಕೂಡಲೇ ನಡೆಸಬೇಕಾದ ಅಗತ್ಯವಿದೆ. ಈಗಾಗಲೇ ಮಳೆ ನೀರು ಹರಿದು ರಸ್ತೆಗೂ ರಸ್ತೆ ಅಂಚುಗಳಿಗೂ ಸಾಕಷ್ಟು ಅಂತರ ನಿರ್ಮಾಣವಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ತಾಲೂಕಿನ ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಅಲ್ಲೂ ಕೂಡ ರಸ್ತೆ ಚರಂಡಿಗಳನ್ನು ಮುಚ್ಚಿ ರಸ್ತೆ ಅಗಲೀಕರಣ ಮಾಡಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
“ಉಜಿರೆಯಲ್ಲಿ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೂಲಕ ಹರಿದು ಉಂಟಾಗುತ್ತಿರುವ ಸಮಸ್ಯೆಯ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗಿದೆ”- ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ,ಉಜಿರೆ ಗ್ರಾಪಂ.

LEAVE A REPLY

Please enter your comment!
Please enter your name here