ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ನಡೆಸಲ್ಪಡುವ ಉಜಿರೆಯ ರತ್ನಮಾನಸ ವಸತಿ ನಿಲಯಕ್ಕೆ ಹೊಸದಾಗಿ 8ನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಪ್ರವೇಶೋತ್ಸವ ಕಾರ್ಯಕ್ರಮವು ಜೂನ್ 7 ರಂದು ನಡೆಯಿತು.
8ನೇ ತರಗತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಅಪ್ರ, ಶಂಖ, ಜಾಗಟೆ ಹಾಗೂ ಪೂರ್ಣಕುಂಭ ಸಹಿತ ಗೌರವಯುತವಾಗಿ ಬರಮಾಡಿಕೊಂಡು, ಪ್ರವೇಶ ದ್ವಾರದಲ್ಲಿ ಅವರ ಕಾಲು ತೊಳೆದು ಮಂಗಳಾರತಿ ಬೆಳಗಿ, ಹಣೆಗೆ ತಿಲಕವಿರಿಸಿ ನಿಲಯದ ಬಳಗೆ ಬರಮಾಡಿಕೊಳ್ಳಲಾಯಿತು.ಹಿರಿಯ ವಿದ್ಯಾರ್ಥಿಗಳು ಬಂದಿರುವ ಎಲ್ಲರನ್ನೂ ಬೆಲ್ಲ, ನೀರು ನೀಡಿ ಸ್ವಾಗತಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ರತ್ನಮಾನಸದ ಹಿರಿಯ (2ನೇ ತಂಡ) ವಿದ್ಯಾರ್ಥಿ, ನಿವೃತ್ತ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ರವರು ಪಂಚ ಶಕ್ತಿಗಳ ಬಗ್ಗೆ ಮಾತನಾಡುತ್ತಾ ಎಲ್ಲಾ ಶಕ್ತಿಗಳು ನಮ್ಮ ರತ್ನಮಾನಸದಲ್ಲಿ ದೊರೆಯುತ್ತವೆ.ಇದರಿಂದ, ವಿದ್ಯಾರ್ಥಿಯ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ ಇವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಹಿರಿಯ ಕಾಲಘಟ್ಟದ ವಿದ್ಯಾರ್ಥಿಗಳು ಡ್ರಗ್ಸ್ ಮತ್ತು ಇತರ ದುಷ್ಟಟಗಳಿಗೆ ಬಲಿ ಬೀಳುದನ್ನು ದಿನನಿತ್ಯ ಕಾಣುತ್ತಿದ್ದೇವೆ.ಅಂತವುಗಳಿಂದ ಮುಕ್ತಿ ಹೊಂದಲು ಗುರುಕುಲದಂತಹ ಶಾಲೆಗಳ ಶಿಕ್ಷಣ ಒದಗಿಸುದರಿಂದ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣದೊಂದಿಗೆ ಬದುಕಿಗೆ ದಾರಿ ತೋರಿಸುವ ಮೌಲ್ಯಯುತವಾದ ಶಿಕ್ಷಣವನ್ನು ನೀಡುವುದರಿಂದ ದೇಶದ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದರು. ತನ್ನ ಎಳೆಯ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ತೊಡಸಿಕೊಂಡ ಲಕ್ಷ್ಮೀ ಗ್ರೂಪ್ ನ ಮಾಲಕ, “ಬದುಕು ಕಟ್ಟೋಣ” ತಂಡದ ಸಂಚಾಲಕ ಮೋಹನ್ ಕುಮಾರ್ ಅವರು ತನ್ನ ಕರ್ತವ್ಯವನ್ನು ಶುದ್ಧ ಭಕ್ತಿಯಿಂದ ನಿರ್ವಹಿಸಿದಲ್ಲಿ ನಾವು ಜೀವನದ ಉತ್ತುಂಗಕ್ಕೇರಲು ಸಾಧ್ಯ.ನಾವು ಗಳಿಸಿದನ್ನು ಸಂಪೂರ್ಣವಾಗಿ ಸ್ವಾರ್ಥಕ್ಕಾಗಿ ಬಳಸದೆ ಸಮಾಜಕ್ಕಾಗಿ ಮೀಸಲಿಡುವಂತಹ ಜೀವನ ಕ್ರಮ ನಮ್ಮದಾಗಬೇಕು. ಇದಕ್ಕೆ ಪೂರಕವಾದ ಶಿಕ್ಷಣ ರತ್ನಮಾನಸವು ಒದಗಿಸಿಕೊಡುತ್ತದೆ ಎಂದು ಹೇಳಿದರು.
ಶ್ರೀ ಧರ್ಮಸ್ಥಳ ಸೆಕೆಂಡರಿ ಶಾಲೆಯ ಮುಖ್ಯೋಪಾದ್ಯಾಯ ಪದ್ಮರಾಜ್ ಅವರು ರತ್ನಮಾನಸದಲ್ಲಿ ಬೆಳೆದಂತಹ ವಿದ್ಯಾರ್ಥಿಗಳು ಎಲ್ಲಿ ಬೇಕಾದರು ಬದುಕಬಲ್ಲರು.ಇಲ್ಲಿ ದೊರಕುವ ಶಿಕ್ಷಣದಲ್ಲಿ ವೈಜ್ಞಾನಿಕ ಸತ್ಯಗಳು. ಅಡಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಉಜಿರೆ ಶಾಖೆಯ ವ್ಯವಸ್ಥಾಪಕ ಶ್ರೀ ಸುಖೇಶ್.ಆರ್ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ನಿಲಯದ ಪಾಲಕ ಯತೀಶ್.ಕೆ ಬಳಂಜರವರು ವಹಿಸಿ ಶುಭ ಹಾರೈಸಿದರು.ನಿಲಯದ ಅಧ್ಯಾಪಕ ರವಿಚಂದ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಿಲಯದ ವಿದ್ಯಾರ್ಥಿಗಳೇ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಆದರ್ಶ ಸ್ವಾಗತಿಸಿ, ಪ್ರಥಮ್ ವಂದಿಸಿ, ಹರ್ಷವರ್ಧನ್ ನಿರೂಪಿಸಿದರು.