ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಪಂಚಾಯತ್ ಮೊಬೈಲ್ ಗೆ ಹಾನಿ, 3000 ನಗದು ದರೋಡೆ: ಪಿಡಿಒ ದೂರಿನಂತೆ ಮೂವರ ವಿರುದ್ಧ ಕೇಸು

0

ಬೆಳ್ತಂಗಡಿ: ತೆಕ್ಕಾರು ಗ್ರಾ.ಪಂ ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ‌ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮೂರು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಗ್ರಾ.ಪಂ ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ಎಂಬವರೇ ಕೃತ್ಯವೆಸಗಿದವರೆಂದು ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ.

ತೆಕ್ಕಾರು ಗ್ರಾ.ಪಂ ಸ್ವಚ್ಚತಾಗಾರ್ತಿ ಪ್ರಮೀಳಾ ಮತ್ತು ಪಿಡಿಒ ಸುಮಯ್ಯಾ ಅವರು ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ.ಸಾರಾಂಶವೇನೆಂದರೆ, ಗ್ರಾ.ಪಂ ವಿವಾದಿತ ಕಟ್ಟಡದಲ್ಲಿ ಯಮುನಾ ಅವರು ಅತಿಕ್ರಮಿಸಿಸಿಕೊಂಡು‌ ನೆಲೆಸಿರುವ ಬಗ್ಗೆ ಈಗಾಗಲೇ ವ್ಯಾಜ್ಯ ಇದೆ. ಅದೇ ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬೇನರ್ ಅಳವಡಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ ವತಿಯಿಂದ ಸಿಬ್ಬಂದಿ ಪ್ರಮೀಳಾ ಅವರು ಯಮುನಾ ಅವರಿಗೆ ನೋಟೀಸು ಜಾರಿಗೊಳಿಸಿ ಸ್ವೀಕೃತಿ ಪಡೆದು ಪಂಚಾಯತ್ ಗೆ ಮರಳಿದ್ದರು. ಇದಾದ ಸ್ವಲ್ಪದರಲ್ಲೇ ಯಮುನಾ ಮತ್ತು ಅವರ ಪುತ್ರ ನವೀನ್ ನಾಯ್ಕ ಅವರು ಮಂಜುನಾಥ ಸಾಲಿಯಾನ್ ಮಬವರ ಕುಮ್ಮಕ್ಕಿನಿಂದ ಪಂಚಾಯತ್ ಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಸಿಬ್ಬಂದಿ ಮೇಲೆ ಕೈ ಮಾಡಿ,‌ ಪಿಡಿಒ‌ ಮತ್ತು ಅವರಿಬ್ಬರ ಮೇಲೂ ಹಲ್ಲೆ ನಡೆಸಿ ದೇಹದ ಭಾಗಗಳ‌ ಮೇಲೆ‌ ಕೈ ಮಾಡಿ ಮಾನಭಂಗ ಮಾಡಿದ್ದಾರೆ.

ಅಲ್ಲದೆ ಗ್ರಾ.ಪಂ ಸರಕಾರಿ ಸೊತ್ತಾಗಿರುವ ಮೊಬೈಲ್ ಫೋನ್ ಅನ್ನು ಪಿಡಿಒ‌ ಅವರಿಂದ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿರುತ್ತಾರೆ. ಪಂಚಾಯತ್ ನಲ್ಲಿದ್ದ ಸರಕಾರಿ ಹಣ 3000 ಸಾವಿರ ದೋಚಿ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ಸಾರೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿದೆ. ಪಂಚಾಯತ್ ಎಡೆಂಡರ್ ಅವರ ಹುದ್ದೆ ಖಾಲಿ ಇರೂದರಿಂದ ಪಿಡಿಒ ನಿರ್ದೇಶನದ ಮೇರೆಗೆ ಸ್ವಚ್ಚತಾಗಾರ್ತಿ ಪ್ರಮೀಲಾ ನೋಟೀಸು ನೀಡುವ ಕರ್ತವ್ಯ ಮಾಡಿಬಂದಿದ್ದರು. ಅವರ ಮೇಲೆ ಆಗಿರುವ ಹಲ್ಲೆ, ಜೀವ ಬೆದರಿಕೆ ಬಗ್ಗೆ ಪಿಡಿಒ‌ ಅವರಿಗೆ ಅವರು ಸಲ್ಲಿಸಿರುವ ದೂರಿನ‌ ಉಲ್ಲೇಖದಂತೆ ಪಂಚಾಯತ್ ಕಚೇರಿಯಲ್ಲಿ ನಡೆದಿರುವ ಅಪರಾಧ ಕೃತ್ಯದ ಬಗ್ಗೆ ಪಿಡಿಒ ಸುಮಯ್ಯಾ ಅವರು ಠಾಣೆಗೆ ದೂರು ದಾಖಲಿಸಿದ್ದಾರೆ.

ಅದರಂತೆ ಕ್ರಮ ಕೈಗೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 109, 504, 323, 506, 354, 353, 392, 34, 2(A) ಮೊದಲಾದ ದಂಡ ಸಂಹಿತೆಯಂತೆ ಕ್ರಿಮಿನಲ್ ಕೃತ್ಯ, ನಿಂದನೆ, ಮಾನಭಂಗ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡ್ಡಿ, ದರೋಡೆ, ಸರಕಾರಿ ಸೊತ್ತು ನಾಶ, ಇತ್ಯಾಧಿಯಡಿ ಕೇಸು ದಾಖಲಿಸಿಕೊಂಡಿದ್ದಾರೆ.‌

LEAVE A REPLY

Please enter your comment!
Please enter your name here