ಶಾಸಕ ಹರೀಶ್ ಪೂಂಜರಿಂದ ಬಿಲ್ಲವ ಸಮಾಜದ ಮೇಲೆ ಆದ ಅನ್ಯಾಯದ ವಿರುದ್ಧ ಪ್ರಚಾರಕ್ಕೆ ಬಂದಿದ್ದೇನೆ-ಮುಸ್ಲಿಮರ ಮತ ಬೇಡ ಎಂದು ಹೇಳಿದ್ದ ಪೂಂಜ ಮುಸ್ಲಿಮರಿಗೆ ಗ್ಯಾಸ್ ಏಜೆನ್ಸಿ ಮಾರಾಟ ಮಾಡಿದ್ದು ಹೇಗೆ?, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಬಿಲ್ಲವ ಸಮಾಜದವರ ಮೇಲೆ ಶಾಸಕ ಹರೀಶ್ ಪೂಂಜರವರಿಂದ ಆಗಿರುವ ಅನ್ಯಾಯದ ವಿರುದ್ಧವಾಗಿ ನಮ್ಮ ಸಮಾಜದ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಮೇ.24ರಂದು ಬೆಳ್ತಂಗಡಿಯ ನಾರಾಯಣ ಗುರು ವಾಣಿಜ್ಯ ಸಂಕೀರ್ಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್‌ರವರು ತಾಲೂಕಿನಲ್ಲಿ ಶಾಸಕರಿಂದ ಬಿಲ್ಲವ ಸಮಾಜದವರಿಗೆ ಆದ ಅನ್ಯಾಯದ ವಿರುದ್ಧವಾಗಿ ಸಮಾಜದ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ, ನಾನು ಹರೀಶ್ ಪೂಂಜರಿಗಿಂತ ಹನ್ನೆರಡು ವರ್ಷ ದೊಡ್ಡವನು. ನನ್ನನ್ನು ಅವರು ಅಣ್ಣ ಅಂದ್ರೆ ತಪ್ಪಿಲ್ಲ. ಆದರೆ, ಅಣ್ಣ ಅನ್ನುವ ಸಂಬಂಧಕ್ಕೆ ಪೂಂಜ ಯಾವತ್ತಾದ್ರೂ ನಿಂತಿದ್ದಾರಾ ಆ ಸಂಬಂಧ ಇಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.5 ವರ್ಷಕ್ಕೆ ಮೊದಲು ಶಾಸಕ ಅಭ್ಯರ್ಥಿ ಸೀಟು ಆಗದೇ ಇದ್ದಾಗ ನಿತ್ಯ ಕರೆ ಮಾಡುತ್ತಿದ್ದರು. ಸೀಟು ಆದ ನಂತರ ಒಂದೇ ಒಂದು ಕರೆ ಮಾಡಿಲ್ಲ. ಅಣ್ಣನ ಸಂಬಂಧವನ್ನೇ ಕಳೆದುಕೊಂಡಿರುವ ತಮ್ಮನ ಅವಶ್ಯಕತೆ ನನಗಿಲ್ಲ. ಶಾಸಕನಾಗುವ ಮೊದಲು ಸುರತ್ಕಲ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಅಧಿಕಾರದ ಅಮಲಿನಲ್ಲಿ ಹಿಂದುತ್ವದ ಹಾದಿ ತಪ್ಪಿರುವುದು ಮರೆತಿರಬೇಕು. ಹಿಂದುತ್ವಕ್ಕೆ ಹೋರಾಡಿ ಊರು ಬಿಟ್ಟವರು, ಜೈಲು ಸೇರಿದವರ ಬಗ್ಗೆ ನೆನಪಿದ್ಯಾ ಇವರಿಗೆ. ಕಾಂಗ್ರೆಸ್ ಪರ ಮತಯಾಚನೆ ಮಾಡುವ ಅವಶ್ಯಕತೆ ನನಗಿಲ್ಲ, ಹಾಗೆ ಮಾಡುವುದಿದ್ದರೆ ನಾನು ಅಭ್ಯರ್ಥಿಯಾಗುವ ಅವಕಾಶ ಇತ್ತು. ನಾನು ಸಿದ್ಧಾಂತವನ್ನು ಬಿಟ್ಟು ಬದುಕಿದವನಲ್ಲ. ಕೊರಗಜ್ಜನ ಕ್ಷೇತ್ರದಲ್ಲಿ ಬಂದಾಗ ಒಂದು ಫೋಟೋ ತೆಗೆದಿದ್ದರು. ಅದನ್ನೇ ಫೇಕ್ ಅಕೌಂಟ್‌ನಲ್ಲಿ ಅಪಪ್ರಚಾರ ಮಾಡಿದ್ದರು. ನಾನು 16ನೇ ವರ್ಷದಲ್ಲಿಯೇ ಸಂಘ ಶಿಕ್ಷಣ ಪಡೆದು 21ನೇ ವರ್ಷದಿಂದ ಹಿಂದುತ್ವದ ಹೋರಾಟಗಾರನಾದೆ. ಅಯೋಧ್ಯೆ ರಾಮ ಮಂದಿರ ಹೋರಾಟ, ಲವ್ ಜಿಹಾದ್ ವಿರುದ್ಧ ಹೋರಾಟ, ಹುಬ್ಬಳ್ಳಿ ಹೋರಾಟ ನಡೆಸಿರುವ ನಾನು ಸುರತ್ಕಲ್‌ನಲ್ಲಿ ನಡೆದ ದೊಡ್ಡ ಹೋರಾಟದಲ್ಲಿ ನಾಲ್ಕು ತಿಂಗಳು ಜೈಲು ಸೇರಿದವನು ಎಂದು ಹೇಳಿದ ಸತ್ಯಜಿತ್ ಸುರತ್ಕಲ್‌ರವರು ಪೂಂಜರಿಂದ ನಾನು ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಕಿಲ್ಲೂರು ಆನಂದ ಗೌಡ, ನೋಣಯ್ಯ ಗೌಡರ ಮತಾಂತರದ ಹೋರಾಟದ ಬಗ್ಗೆ ನಿಮಗೆ ಗೊತ್ತಿದ್ಯಾ?,ಮಹೇಶಣ್ಣ ಒಂದು ಕರೆ ಕೊಟ್ಟರೆ 500 ಜನ ಬರ್ತಿದ್ರು ಗೊತ್ತಿದ್ಯಾ?, ಶಿಶಿಲದ ದೇವರ ಮೀನಿನ ಹತ್ಯೆಯ ವಿರುದ್ಧದ ಹೋರಾಟದ ಬಗ್ಗೆ ಗೊತ್ತಿದ್ಯಾ?, ಯಾವುದಾದ್ರೂ ಜೈಲಿಗೆ ಭೇಟಿಕೊಟ್ಟು ಕಾರ್ಯಕರ್ತರನ್ನು ಭೇಟಿಯಾಗಿದ್ದೀರಾ?, ನೆಟ್ಟಾರ್, ಶರತ್ ಮಡಿವಾಳ ಹೊರತುಪಡಿಸಿ ಉಳಿದ ಹಿಂದುಗಳ ಬಲಿದಾನ ಯಾಕಾಯ್ತು ಗೊತ್ತಾ ಎಂದು ಕೇಳಿದ ಸತ್ಯಜಿತ್ ಅವರು ಅರಣ್ಯಾಧಿಕಾರಿಯಾಗಿದ್ದ ಸಂಧ್ಯಾರವರನ್ನು ಮಹಿಳೆಯೆಂದು ನೋಡದೆ ಮಾನವೀಯತೆಯನ್ನು ಮರೆತು ದುರುದ್ದೇಶಪೂರ್ವಕವಾಗಿ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿದ್ದು, ನಂತರ ಹೈಕೋರ್ಟ್ ನಿಮಗೆ ಚಾಟಿ ಬೀಸಿದ್ದು ನೆನಪಿದೆಯೇ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಉಪಾಧ್ಯಕ್ಷ ಶೇಖರ ಬಂಗೇರ, ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ರವಿ ಪೂಜಾರಿ ಚಿಲಿಂಬಿ, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಎಂ.ಕೆ.ಪ್ರಸಾದ್ ಶಿರ್ಲಾಲು, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಿತೀಶ್ ಕೋಟ್ಯಾನ್, ಸುಲ್ಕೇರಿ ಮೊಗ್ರು ಬಿಲ್ಲವ ಸಮಿತಿಯ ಅಧ್ಯಕ್ಷ ಕೊರಗಪ್ಪ ಪೂಜಾರಿ, ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ, ಸಂಘದ ಮಾಜಿ ನಿರ್ದೇಶಕ ವಿಶ್ವನಾಥ ಪೂಜಾರಿ ದಡ್ಡಲಕಾಡು ಮತ್ತು ವೆಂಕಪ್ಪ ಕೋಟ್ಯಾನ್ ಇಂದಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here