ಕನ್ನಡ ಸಾಹಿತ್ಯ ಪರಿಷತ್ ಗೆ 5 ದಶಕವಾದರೂ ನಿವೇಶನದ ಕೊರತೆ: 25ನೇ ಯ ಜಿಲ್ಲಾ ಸಮ್ಮೇಳನದಲ್ಲಿ ಠರಾವು ಮಂಡನೆ

0

ಬೆಳ್ತಂಗಡಿ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ನಿರ್ಮಿಸಲು ಜಿಲ್ಲಾ ಕೇಂದ್ರದಲ್ಲಿ ನಿವೇಶನ ಕಾದಿರಿಸುವ ಜೊತೆಗೆ 5 ದಶಕ ಸಂದರೂ ಇನ್ನೂ ಕೂಡ ತಾಲೂಕು ಕೇಂದ್ರಗಳಲ್ಲಿ ನಿವೇಶನವಿಲ್ಲ.
ಅಲ್ಲದೆ ಜಿಲ್ಲೆಯ 9 ಕಂದಾಯ ತಾಲೂಕುಗಳ ಪೈಕಿ ಉಳಿದ 6 ತಾಲೂಕುಗಳಲ್ಲಿ‌ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.

ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಫೆ.5 ರಂದು ನಡೆದ ದ.ಕ ಜಿಲ್ಲಾ ಮಟ್ಟದ 25 ನೇಯ ಕನ್ನಡ ಸಾಹುತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಈ ರೀತಿಯ 10 ಠರಾವುಗಳನ್ನು ಮಂಡಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಶ್ರೀನಾಥ್ ವಹಿಸಿದ್ದರು. ‌ಸಮ್ಮೇಳನದ ಸರ್ವಾಧ್ಯಕ್ಷೆ ಹೇಮಾವತಿ ವೀ ಹೆಗ್ಗಡೆಯವರು ಉಪಸ್ಥಿತರಿದ್ದರು.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ಮೂರು ವಿಭಾಗಗಳಿದ್ದು, ಇಲ್ಲೆಲ್ಲಾ ಶಿಕ್ಷಕರ ಕೊರತೆ, ಕಟ್ಟಡ, ಪೀಠೋಕರಣ, ಪಾಠೋಪಕರಣಗಳ ಕೊರತೆಯಿಂದ ಮಕ್ಕಳ ಕಲಿಕೆಯಲ್ಲಿ ತೀವ್ರ ತರದ ದುಷ್ಪಾರಿಣಾಮ ಎದ್ದು‌ಕಾಣುತ್ತಿದೆ. ಇದನ್ನು ಪರಿಹರಿಸಿ ಮಕ್ಕಳಿಗೆ ಸಂತಸ ಕಲಿಕೆಗೆ ವಾತಾವರಣವನ್ನು ಕಲ್ಪಿಸಿ ಕೊಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಹಕ್ಕೊತ್ತಾಯ ಮಾಡುತ್ತಿದ್ದೇವೆ.
ಅನುದಾನಿತ ಶಾಲೆಯಲ್ಲಿ ಕಳೆದ ಒಂದೆರಡು ದಶಕದಿಂದ ನಿವೃತ್ತಿ ಹೊಂದಿದ ಶಿಕ್ಷಕರ ಹುದ್ದೆಗಾಗಲಿ, ಹೆಚ್ಚುವರಿ ಶಿಕ್ಷಕರ ಹುದ್ದೆಗಾಗಲಿ ಯಾವುದೇ ನೇಮಕಾತಿಗಳು ನಡೆದಿಲ್ಲ. ಇದರಿಂದಾಗಿ ಹಲವಾರು ಅನುದಾನಿತ ಶಾಲೆಗಳು ಹಳ್ಳಿ ಪ್ರದೇಶದಲ್ಲಿ ಮುಚ್ಚಲ್ಪಟ್ಟಿವೆ. ಈ ಶಾಲೆಗಳಿಗೆ ತಕ್ಷಣದಿಂದ ಶಿಕ್ಷಕರನ್ನು ನೇಮಿಸಿ ಮರು ಪ್ರಾರಂಭಿಸಲು ಈ ಸಮ್ಮೇಳನವು ಶಿಕ್ಷಣ ಇಲಾಖೆಯನ್ನು ಒತ್ತಾಯಿಸುತ್ತದೆ. ಕನ್ನಡ ಮಾಧ್ಯಮ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಮಕ್ಕಳ ಕನ್ನಡ ಕಲಿಕೆಗೆ ಪೂರಕವಾಗಿ ಶ್ರಮಿಸುತ್ತಿದ್ದರೂ ಆ ಶಾಲಾ ಮಕ್ಕಳು ಅಕ್ಷರದಾಸೋಹ ಬಿಸಿಯೂಟದ ಸೌಲಭ್ಯದಿಂದ ವಂಚಿತವಾಗಿವೆ. ಆದುದರಿಂದ ಈ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಅಕ್ಷರ ದಾಸೋಹ ಅನುಕೂಲವನ್ನು ಕಲ್ಪಿಸಿಕೊಟ್ಟು ಕನ್ನಡದ ಅಭಿವೃದ್ಧಿಯನ್ನು ಸಾಧಿಸಲು ಸಹಕರಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದೇವೆ.
ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಬೆರಳಣಿಕೆಯ ಶಾಲೆಗಳಲ್ಲಿ ಮಾತ್ರ ವಿಶೇಷ ಅನುದಾನ ಬಿಡುಗಡೆಯಾಗುತ್ತಿರುವುದು ಕಂಡು ಬರುತ್ತಿದ್ದು, ಈ ಅನುದಾನಗಳನ್ನು ಎಲ್ಲಾ ಶಾಲೆಗಳಿಗೆ ಏಕರೂಪದಲ್ಲಿ ವಿಸ್ತರಿಸಿ ತಾರತಮ್ಯವಿಲ್ಲದೆ ಮಂಜೂರಾತಿ ಮಾಡಬೇಕು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಂತದಲ್ಲಿ ಈಗ ನಡೆಯುತ್ತಿರುವ ಪ್ರತಿಭಾ ಕಾರಂಜಿಯ ಕಾರ್ಯಕ್ರಮಗಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಜೊತೆಯಾಗಿ ಸ್ಪರ್ಧೆಗಳು ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಅನುದಾನದ ಕೊರತೆಯಿಂದಾಗಿ ಆಂಗ್ಲಮಾಧ್ಯಮ ಶಾಲೆಗಳೊಂದಿಗೆ ಪೈಪೋಟಿ ನಡೆಸಲು ಆಗುತ್ತಿಲ್ಲ. ಇದರಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳ ಪ್ರತಿಭೆಗೆ ಅವಕಾಶಗಳು ಸರಿಯಾಗಿ ದೊರೆಯುತ್ತಿಲ್ಲ. ಆದುದರಿಂದ ಕನ್ನಡ ಮಾಧ್ಯಮ ಮತ್ತು ಆಂಗ್ಲಮಾಧ್ಯಮ ಶಾಲೆಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸುವರೇ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು.‌
ಪದವಿಪೂರ್ವ ಶಿಕ್ಷಣದಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು, ಪದವಿ ಕನ್ನಡ ಐಚ್ಛಿಕವನ್ನು ಎಲ್ಲಾ ಕಾಲೇಜುಗಳಲ್ಲಿ ಅಧ್ಯಯನದ ಒಂದು ವಿಷಯವನ್ನಾಗಿ ಕಡ್ಡಾಯವಾಗಿ ಜಾರಿ ಮಾಡುವುದರ ಮೂಲಕ ಕನ್ನಡಕ್ಕೆ ಸ್ಥಾನಮಾನ ನೀಡಬೇಕು.
ಹೊರನಾಡು ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕ್ಕೋತ್ತರ (ಎಂ.ಎ) ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಪ್ರತಿ ವರ್ಷ ರೂ. 25,000 ಪ್ರೋತ್ಸಾಹ ಧನ ನೀಡುತ್ತಿದ್ದು, ಇದೇ ರೀತಿ ಕರ್ನಾಟಕ ರಾಜ್ಯದ ಒಳಗೆ ಪದವಿ ಶಿಕ್ಷಣದಲ್ಲಿ ಕನ್ನಡ ಐಚ್ಛಿಕವನ್ನು ಆಯ್ಕೆ ಮಾಡಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಈ ಪ್ರೋತ್ಸಾಹ ಧನವನ್ನು ಮಂಜೂರು ಮಾಡಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವುದರಿಂದ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಸಚಿವರು ಇಲಾಖೆಯ ಸಭೆ ನಡೆಸುವಾಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಜಿಲ್ಲಾಡಳಿತ ಸಭೆಗೆ ಆಹ್ವಾನಿಸುವುದು ಮಾತ್ರವಲ್ಲದೆ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ನೀಡುವ ಸ್ಥಾನಮಾನವನ್ನು ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದು, ಈ‌ ಬಗ್ಗೆ ನಡೆಯುವ ಸಭೆಗಳಿಗೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗಳ ಸಭೆಗಳಿಗೆ ಕಸಾಪ ಅಧ್ಯಕ್ಷರನ್ನು ಜಿಲ್ಲಾಡಳಿತ ಆಹ್ವಾಮಿಸಬೇಕು ಇತ್ಯಾಧಿ ಠರಾವುಗಳನ್ನು ಮಂಡಿಸಲಾಯಿತು. ಗೌರವ ಕೋಶಾಧ್ಯಕ್ಷ ಬಿ ಐತಪ್ಪ ನಾಯ್ಕ್ ಠರಾವು ಮಂಡಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ ಮತ್ತು ವಿನಯ ಆಚಾರ್ಯ, ಸುಳ್ಯ, ಪುತ್ತೂರು, ಮೂಲ್ಕಿ, ಬೆಳ್ತಂಗಡಿ ಮತ್ತು ಕಡಬ ತಾಲೂಕು ಕಸಾಪ ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಕಾರ್ಯಕಾರಿಣಿ ಸದಸ್ಯ ಮೋಹನದಾಸ ಸುರತ್ಕಲ್ ನಿರೂಪಿಸಿದರು.

p>

LEAVE A REPLY

Please enter your comment!
Please enter your name here