ಉಜಿರೆ: “ಇಂದಿನ ಹುಡುಗಿಯೇ ಮುಂದಿನ ತಾಯಿ, ಅವಳು ಮುಂದಿನ ಜನಾಂಗದ ಶಿಲ್ಪಿ. ಸುವ್ಯವಸ್ಥಿತ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬನೂ ಮುಖ್ಯ ಸ್ಥಾನವನ್ನು ವಹಿಸುತ್ತಾನೆ” ಎಂದು ಬಂಟ್ವಾಳ ವಿಭಾಗದ ಡಿ ವೈ ಎಸ್ ಪಿ ಪ್ರತಾಪ್ ಸಿಂಗ್ ತೊರಾಟ್, ಎಸ್ ಡಿ ಎಂ ಕಾಲೇಜಿನ ಮನಶಾಸ್ತ್ರ ವಿಭಾಗ ಮತ್ತು ಕೌನ್ಸಿಲಿಂಗ್ ಸೆಲ್ ಸಹಭಾಗಿತ್ವದಲ್ಲಿ ನಡೆಸಿದ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆ 1956 ಮತ್ತು ಮಾನವ ಕಳ್ಳ ಸಾಗಣೆ ಕಾಯಿದೆಯ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ನುಡಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳನ್ನುದ್ದೇಶಿಸಿ “ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳ ಸಾಗಣೆಯು ಒಂದಕ್ಕೊಂದು ಸಂಬಂಧಿಸಿದ್ದಾಗಿದ್ದು ಅದರ ನಿರ್ಮೂಲನೆಯತ್ತ ನಾವು ದೃಷ್ಟಿ ಹರಿಸಬೇಕು” ಎಂದು ಸೂಚನೆಯನ್ನಿತ್ತರು. ಕಾರ್ಯಕ್ರಮದಲ್ಲಿ ಇವರೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಉಪಸ್ಥಿತರಿದ್ದರು. ಇಂದಿನ ಕಾಲಘಟ್ಟದಲ್ಲಿ ಹುಡುಗಿಯರು ಅನುಭವಿಸುತ್ತಿರುವಂತಹ ತೊಂದರೆಗಳ ಒಳಹೊರಗಣ ಆಗುಹೋಗುಗಳ ಬಗ್ಗೆಯಲ್ಲದೇ ಆ ಸಂಧರ್ಭದಲ್ಲಿ ತೆಗೆದುಕೊಳ್ಳಬಹುದಾದ ನಡೆಯ ಬಗ್ಗೆಯೂ ಈ ಸಂದರ್ಭದಲ್ಲಿ ಬೆಳ್ತಂಗಡಿ ಶಿಶು ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಂದನಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಠಾಣೆಯ ಪಿ ಎಸ್ ಐ ನಂದಕುಮಾರ್, ಎಸ್ ಡಿ ಎಂ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿ, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ವಂದನಾ ಜೈನ್, ಕಾರ್ಯಕ್ರಮ ಸಂಯೋಜಕರಾದ ಮನಶ್ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಎಚ್, ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ| ರವಿಶಂಕರ್ ಹಾಗೂ ಕಾಲೇಜಿನ ಇತರೇ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸ್ನಾತಕೋತ್ತರ ಕಾಲೇಜಿನಲ್ಲಿ ನಡೆದ ಜಾಗೃತಿ ಕಾರ್ಯಕ್ರವನ್ನು ದ್ವಿತೀಯ ಮನಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿನಿ ಸೌಮ್ಯ ಶ್ರೀ.ಕೆ. ಸ್ವಾಗತಿಸಿ ನಿರೂಪಿಸಿ ದ್ವಿತೀಯ ಮನಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿನಿ ಕೌಸ್ತುಭ ವಂದಿಸಿದರು.