ಉಜಿರೆಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಪೂರ್ವತಯಾರಿ ಸಭೆ

0


ಉಜಿರೆ : ದ.ಕ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ.3 ರಿಂದ 5ರವರೆಗೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ದ.ಕ.ಕಸಾಪ ಜಿಲ್ಲಾ ಸಮ್ಮೇಳನದ ಕುರಿತು ಡಿ.27 ರಂದು ಉಜಿರೆ ರಾಮಕೃಷ್ಣ ಸಭಾಭವನದಲ್ಲಿ ಪೂರ್ವತಯಾರಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉಜಿರೆ ಜನಾರ್ಧನ ದೇವಸ್ಥಾನದ ಹಾಗೂ ದ. ಕ. ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ವಹಿಸಿದ್ದರು. ಅವರು ಮಾತನಡುತ್ತಾ ಕಾರ್ಯಕ್ರಮ ವಿಭಿನ್ನವಾಗಿ ಮೂಡಿ ಬರಲು ಹಿರಿಯರ ಅನುಭವದೊಂದಿಗೆ ಕಿರಿಯರಿಗೆ ಅವಕಾಶ ನೀಡುವ ಮೂಲಕ ಉಜಿರೆಯಲ್ಲಿ ನಡೆಯುವ ಸಮ್ಮೇಳನದ ಯಶಸ್ವಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
“ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.ಈ ಮಧ್ಯೆ ಸದಸ್ಯತ್ವವನ್ನು ಹೆಚ್ಚಾಗಿ ಮಾಡಬೇಕು. ಎಲ್ಲರ ಸಹಕಾರ ಸಲಹೆ ಅಗತ್ಯವಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಎಂದು ತಿಳಿದು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು. ಹಿರಿಯರೊಂದಿಗೆ ಕಿರಿಯರಿಗೂ ಅವಕಾಶಗಳನ್ನು ನೀಡಬೇಕು” ಎಂದು ಕರೆ ನೀಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಮಾತನಾಡಿ, “ಸರಕಾರದ ಇಲಾಖೆಗಳ ಸಹಯೋಗದ ಜತೆಗೆ ಸಾರ್ವಜನಿಕರ ಸಹಕಾರ ಅತ್ಯವಶ್ಯವಾಗಿದೆ. ಯಾವುದೇ ಅಪಸ್ವರ ಬಾರದಂತೆ ಮುನ್ನಡೆಸೋಣ” ಎಂದು ಆಶಿಸಿದರು.

ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಿವಾಸ್ ಮಾತನಾಡಿ, “ಸಮ್ಮೇಳನ ಆಶಯಕ್ಕೆ ತಕ್ಕ ಗೋಷ್ಠಿಗಳು ಇಟ್ಟುಕೊಳ್ಳಬೇಕು. ಹಿರಿಯರ ಜತೆಗೆ ವಿದ್ಯಾರ್ಥಿಗಳು ಎಂಬ ಚಿಂತನೆಯಡಿ ಸಂವಾದ ಕಾರ್ಯಕ್ರಮ ಮಾಡುವ ಬಗ್ಗೆ ಅವರು ಸಲಹೆ ನೀಡಿದ್ದಾರೆ. 9 ತಾಲೂಕುಗಳಿಂದ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳನ್ನು ಸೇರಿಕೊಂಡು ಸಮ್ಮೇಳನ ನಡೆಯಲಿದೆ. ಎಲ್ಲಾ ತಾಲೂಕುಗಳಿಗೂ ಸಮಾನ ಅವಕಾಶ ನೀಡಲಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ವಿವಿಧ ಸಮಿತಿಗಳ ಜವಾಬ್ದಾರಿ ಹಂಚುವ ಕುರಿತು ಚರ್ಚಿಸಲಾಯಿತು. ಕಸಾಪ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಿ.ಯದುಪತಿ ಗೌಡ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಆರ್.ಶೆಟ್ಟಿ ಉಪಸ್ಥಿತರಿದ್ದರು. ಪ್ರಮುಖ ಸಾಹಿತ್ಯ ಗಣ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

ತಾಲೂಕು ಕಸಾಪ ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು .

LEAVE A REPLY

Please enter your comment!
Please enter your name here