ಕೊಲ್ಲಮೊಗ್ರದಲ್ಲಿ ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಅ.27 ರಂದು ಪ್ರತಿಭಟನೆ

0

 

ವೈನ್ ಶಾಪ್ 15 ದಿನದಲ್ಲಿ ತೆಗೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ : ಹೋರಾಟ ಸಮಿತಿ

ಕೊಲ್ಲಮೊಗ್ರದ ಜನರಿಗೆ ಯಾವುದೇ‌ ಮುನ್ಸೂಚನೆ ದೊರೆಯದ ರೀತಿಯಲ್ಲಿ ಸ್ಥಳೀಯ ಕೆಲವರ ಸಹಕಾರದಿಂದ ಮದ್ಯದಂಗಡಿ ತೆರೆದುಕೊಂಡಿದ್ದು ಇದನ್ನು ನಮ್ಮ ಗ್ರಾಮದಿಂದ ತೆರವು ಮಾಡಬೇಕೆಂದು ಆಗ್ರಹಿಸಿ ಊರಿಗೆ ಊರೇ ಸೇರಿಕೊಂಡು ಬೃಹತ್ ಪ್ರತಿಭಟನೆಯನ್ನು ಅ.27 ರಂದು‌ ಹಮ್ಮಿಕೊಳ್ಳಲಾಗಿದೆ ಎಂದು‌ ಹೋರಾಟ ಸಮಿತಿಯ ಪ್ರಮುಖರಾದ ಕೆ.ಪಿ. ಗಿರಿಧರ ಹಾಗೂ ಸತೀಶ್ ಟಿ.ಎನ್.‌ ಹೇಳಿದ್ದಾರೆ.

 

ಅ.25 ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಮಾಹಿತಿ ನೀಡಿದರು.

 

ಜನಜಾಗೃತಿ ವೇದಿಕೆಯ ಸದಸ್ಯರಾಗಿರುವ ಕೆ.ಪಿ. ಗಿರಿಧರರು ಮಾತನಾಡಿ ಕೊಲ್ಲಮೊಗ್ರದಲ್ಲಿ ಎರಡು ಮಧ್ಯವರ್ಜನ ಶಿಬಿರಗಳಾಗಿದೆ. ಶಿಬಿರದಲ್ಲಿ ಭಾಗವಹಿಸಿದ ಶೇ.80ಕ್ಕೂ ಹೆಚ್ಚು ಮಂದಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಸುಮಾರು 10 ಜನ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಗ್ರಾಮದಲ್ಲಿ ವೈನ್ ಶಾಪ್ ಆರಂಭಗೊಂಡದ್ದು ಬೇಸರ ತರಿಸಿದೆ. ಇದನ್ನು ತೆರವುಗೊಳಿಸಲು ಆಗ್ರಹಿಸಿ ಅಕ್ಟೋಬರ್ 27ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೊಲ್ಲಮೊಗ್ರದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಧರ್ಮಸ್ಥಳ ಸಂಘ, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಊರಿಗೆ ಊರೇ ಭಾಗವಹಿಸಲಿದೆ ಎಂದು ಅವರು ಹೇಳಿದರು.

 

ಗ್ರಾಮದಲ್ಲಿ ಮದ್ಯದ ಅಂಗಡಿ ಆರಂಭಕ್ಕೆ ಕೆಲವೇ ಕೆಲವು ಮಂದಿ ಸಹಕಾರ ನೀಡಿದ್ದಾರೆ. ಕಟ್ಟಡ ಮಾಲಕರು ಮತ್ತು ಆ ಕೊಠಡಿಯಲ್ಲಿ ಈ ಹಿಂದೆ ವ್ಯಾಪಾರ ನಡೆಸಿದವರು ಕೊಠಡಿ ಖಾಲಿ ಮಾಡಿದ್ದಾರೆ. ಈಗಾಗಲೇ ಈ ಮಧ್ಯದ ಅಂಗಡಿ ಬರಲು ಯಾರು ಕಾರಣರೆಂದು ಊರಿನವರಿಗೆ ಗೊತ್ತಿದೆ. ಅದನ್ನ ಇಲ್ಲಿ ಹೇಳುವುದಿಲ್ಲ. ನಮಗೆ ಈ ಮದ್ಯದ ಅಂಗಡಿ ಊರಿನಿಂದಲೇ ಹೋಗಬೇಕೆಂಬ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ಕ್ಷೇತ್ರದ ಶಾಸಕರು, ಸಚಿವರೂ ಆಗಿರುವ ಎಸ್ ಅಂಗಾರರ ಜೊತೆ ಮನವಿ ಮಾಡಿಕೊಂಡಿದ್ದು 15 ದಿವಸಗಳೊಳಗೆ ಮದ್ಯದ ಅಂಗಡಿಯನ್ನು ತೆರವು ಮಾಡುವ ಭರವಸೆ ನೀಡಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ.ವೀರೇಂದ್ರ ಹೆಗ್ಗಡೆಯವರಿಗೂ ಮನವಿ ಸಲ್ಲಿಸುತ್ತೇವೆ. ಗ್ರಾ.ಪಂ.ಗೂ ಈಗಾಗಲೇ ತೆರವು ಮಾಡಬೇಕೆಂದು ಕೇಳಿ ಮನವಿ ನೀಡಲಾಗಿದೆ. ಮದ್ಯದ ಅಂಗಡಿಯ ಸ್ವಲ್ಪ ದೂರದಲ್ಲಿ ಶಾಲೆ, ಮಂದಿರ ಇದೆ ಹೀಗಿರುವಾಗ ಹೇಗೆ ಅನುಮತಿ ನೀಡುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಟಿ.ಎನ್. ಸತೀಶ್ ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್ ಎ ರಾಮಚಂದ್ರರು ಮಾತನಾಡಿ ಸಚಿವರು 15 ದಿವಸಗಳೊಳಗೆ ಮದ್ಯದಂಗಡಿ ತೆರವು ಮಾಡುವ ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ಮದ್ಯದ ಅಂಗಡಿ ಹೋಗದೇ ಇದ್ದರೆ ಜನಜಾಗೃತಿ ವೇದಿಕೆ ವತಿಯಿಂದ ಧರಣಿ ನಡೆಸಿ ಅಂಗಡಿ ತೆರವಾಗುವ ತನಕ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಹೋರಾಟ ಸಮಿತಿಯ ಕಾನೂನು ಸಲಹೆಗಾರರಾಗಿರುವ, ನ್ಯಾಯವಾದಿ ಬಾಲಸುಬ್ರಹ್ಮಣ್ಯ ಎನ್. ಜಿ ಮಾತನಾಡಿ ಗ್ರಾಮದಲ್ಲಿ ಮದ್ಯದ ಅಂಗಡಿ ಆರಂಭಿಸಲು ಪಂಚಾಯಿತಿನ ಅನುಮತಿ ಪಡೆಯುವ ಕಾನೂನು ಬರಬೇಕು. ಈಗ ಪಂಚಾಯತ್ ಅನುಮತಿ ಬೇಕಿಲ್ಲ. ಆದ್ದರಿಂದ ಕಾನೂನಿಗೆ ತಿದ್ದುಪಡಿ ಆಗಿ ಪಂಚಾಯತ್ ಅನುಮತಿ ಆಗಬೇಕು. ಹಾ್ಎಂದು ನಾವು ಸರಕಾರಕ್ಕೆ ಸಚಿವರ ಮೂಲಕ ಮನವಿ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಮಹೇಶ್ ಶೆಟ್ಟಿ ಮೇನಾಲ, ತೀರ್ಥರಾಮ ಟಿ, ಸತೀಶ್ ಡಿ ಇದ್ದರು.

LEAVE A REPLY

Please enter your comment!
Please enter your name here