ಮೀನುಗಾರಿಕೆ ಉತ್ತೇಜನಕ್ಕೆ ಹಾಗೂ ಮೀನುಗಾರರ ಆದಾಯ ಹೆಚ್ಚಿಸಲು ಹಲವು ಯೋಜನೆಗಳು ಜಾರಿ :  ಎ.ವಿ.ತೀರ್ಥರಾಮ

0

 

 ಮೀನುಗಾರಿಕೆ ಉತ್ತೇಜಿಸುವುದು ಹಾಗೂ ಮೀನುಗಾರರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ಮತ್ಸ್ಯವಾಹಿನಿ ಯೋಜನೆಯಡಿ ಗ್ರಾಮಾಂತರ ಭಾಗಕ್ಕೆ ಮೀನು ಸಾಗಾಟಕ್ಕೆ ಅನುಕೂಲವಾಗುವಂತೆ ರಾಜ್ಯಕ್ಕೆ 300 ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಬಿಡುಗಡೆಯಾಗಿದ್ದು, ಶೀಘ್ರ ಅವುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ತೀರ್ಥರಾಮ ತಿಳಿಸಿದ್ದಾರೆ.

 

ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದ್ರ ಮೀನುಗಾರಿಕೆಯಲ್ಲಿ ಮೀನು ಉತ್ಪತ್ತಿ ಕಡಿಮೆಯಾಗುತ್ತಿರುವುದರಿಂದ ಒಳನಾಡು ಮೀನುಗಾರಿಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. 250 ಮೀನು ಮರಿಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ಮೀನು ಕೃಷಿ ಮಾಡಲು 2 ಲಕ್ಷ ರೂವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಜತೆಗೆ ಐಸ್‌ಪ್ಲ್ಯಾಂಟ್, ಐಸೊಲೇಟೆಡ್ ವಾಹನ ನಿರ್ಮಿಸಲು ಸಬ್ಸಿಡಿ ಸಹಿತ ಸಾಲ ನೀಡಲಾಗುವುದು ಎಂದರು.ಮೀನುಗಾರರಿಗೆ ಸಹಕಾರ ಸಂಘಗಳಿಂದ ಸಾಲ ಕೊಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಶೀಘ್ರದಲ್ಲೇ ಇದು ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ ಎಂದು ತೀರ್ಥರಾಮ ತಿಳಿಸಿದರು.


ಬಂದರುಗಳ ಅಭಿವೃದ್ಧಿ ಕಾರವಾರದ ಮೀನುಗಾರಿಕಾ ಬಂದರಿನ 250 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಅಂಕೋಲಾದಲ್ಲಿ 6 ಸಾವಿರ ಕೋಟಿ ರು. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಿಸಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದರು. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರ ರು.ವರೆಗೆ ಸಾಲ ಯೋಜನೆ ರೂಪಿಸಲಾಗಿದೆ. ಮೀನುಗಾರರ ಮಕ್ಕಳಿಗೆ 50 ಕೋಟಿ ರು. ವಿದ್ಯಾನಿಧಿ, 5 ಸಾವಿರ ಮೀನುಗಾರರಿಗೆ ಮನೆ ನಿರ್ಮಿಸಿ ಕೊಡುವ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಅಲ್ಲದೆ ಮೀನುಗಾರ ಸ್ತ್ರೀಶಕ್ತಿ ಸಂಘಗಳಿಗೆ 3ಲಕ್ಷ ರು.ವರೆಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಅಲ್ಲದೆ, ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಮೀನುಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಮೀನುಗಾರಿಕೆ ವೇಳೆ ಮೃತಪಟ್ಟರೆ ರಾಜ್ಯ ಮತ್ತು ಕೇಂದ್ರದ ನೆರವು ಸೇರಿ ಒಟ್ಟು ೧೧ ಲಕ್ಷ ರು. ಪರಿಹಾರಧನ ಸಿಗಲಿದೆ ಎಂದು ತೀರ್ಥರಾಮ ಹೇಳಿದರು.
ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಗಣೇಶ್ ಹೊಸಬೆಟ್ಟು, ವಿಜಯಕುಮಾರ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here