






ಕುಪ್ಪೆಟ್ಟಿ: ಇಲ್ಲಿನ ಹಳೆಯ ಪ್ರಯಾಣಿಕರ ತಂಗುದಾಣದ ಕುಸಿಯುವ ಹಂತದಲ್ಲಿದ್ದ ಹಂಚಿನ ಮೇಲ್ಛಾವಣಿಯನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಕುಪ್ಪೆಟ್ಟಿಯಲ್ಲಿರುವ ಪ್ರಯಾಣಿಕರ ತಂಗುದಾಣವು ಅತ್ಯಂತ ಹಳೆಯ ಕಟ್ಟಡವಾಗಿದ್ದು, ಇತ್ತೀಚೆಗೆ ಅರ್ಧಂಬರ್ಧ ಕುಸಿದು ಬೀಳುವ ಸ್ಥಿತಿಯಲ್ಲಿಸಿಲುಕಿತ್ತು. ಕಟ್ಟಡದ ಗೋಡೆಗಳೆಲ್ಲವೂ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬಿದ್ದು ಅಪಾಯ ಸಂಭವಿಸುವ ಭೀತಿ ಎದುರಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಅಪಾಯಕಾರಿ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನ ತಂಗುದಾಣ ನಿರ್ಮಿಸುವಂತೆ ಕಣಿಯೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ, ಸದ್ರಿ ಕಟ್ಟಡವು ಪಂಚಾಯಿತಿ ಸ್ವತ್ತಿಗೆ ಸೇರಿದ್ದಲ್ಲ ಎಂಬ ಕಾರಣಕ್ಕೆ ಪಂಚಾಯತ್ ಆಡಳಿತವು ತೆರವುಗೊಳಿಸುವ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.


ಪಂಚಾಯಿತಿಯಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರು-ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡ ಸ್ಥಳೀಯ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಸ್ವತಃ ಮುತುವರ್ಜಿ ವಹಿಸಿದರು.
ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತಂಗುದಾಣದ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ, ಪ್ರಯಾಣಿಕರಿಗೆ ನೆರಳು ಹಾಗೂ ರಕ್ಷಣೆ ಸಿಗುವಂತೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ರಿಕ್ಷಾ ಚಾಲಕರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.









