ಮುಂದಿನ ಜೀವನ ರೂಪಿಸಲು, ಸವಿಯಲು ಒಟ್ಟಾಗಿರೋಣ: ಬಿ. ಜಯಂತ ಶೆಟ್ಟಿ:ಉಜಿರೆಯಲ್ಲಿ ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತ ಕಾರ್ಯಕರ್ತರ ಕಾರ್ಯಾಗಾರ

0

ಉಜಿರೆ: ಧರ್ಮಸ್ಥಳ ಯೋಜನೆಯಲ್ಲಿ ನಾವೆಲ್ಲರೂ ಒಟ್ಟಾಗಿ ಬೆಳೆದು, ಸಂತೋಷದಿಂದ ಸಮಾಜಕ್ಕೆ ಉತ್ತಮ ಸೇವೆ ನೀಡಿದವರು. ಇದರಿಂದಾಗಿಯೇ ಇಂದಿಗೂ ಜನರು ನಮ್ಮನ್ನು ಧರ್ಮಸ್ಥಳದವರೆಂದು ಗುರುತಿಸುತ್ತಾರೆ. ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಲು ಮತ್ತು ಸವಿಯಲು ನಾವೆಲ್ಲರೂ ಒಟ್ಟಾಗಿರೋಣ ಎಂದು ಹಿರಿಯ ಕಾರ್ಯಕರ್ತ ಬಿ. ಜಯಂತ ಶೆಟ್ಟಿ ಹೇಳಿದರು.

ಉಜಿರೆಯ ಓಷನ್ ಪರ್ಲ್‌ನಲ್ಲಿ ನಡೆದ ಧರ್ಮಸ್ಥಳ ಯೋಜನೆಯಲ್ಲಿ ಸೇವೆ ಸಲ್ಲಿಸಿದ್ದವರು ಹಾಗೂ ನಿವೃತ್ತರಾದವರ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.ಧರ್ಮಸ್ಥಳ ನಮಗೆ ಉತ್ತಮ ಜೀವನ ರೂಪಿಸಿಕೊಟ್ಟಿದೆ. ಶ್ರೀ ಕ್ಷೇತ್ರದ ಬಗ್ಗೆ ಅಪಾರ ನಂಬಿಕೆಯೊಂದಿಗೆ ಧರ್ಮಸ್ಥಳದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.

ಸಂಘಟನೆಯಲ್ಲಿ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಒಗ್ಗಟ್ಟಿನಿಂದಿರಬೇಕು. ಮುಂದಿನ ದಿನಗಳಿಗೆ ಉತ್ತಮ ಯೋಜನೆ ಹಾಗೂ ಚಿಂತನೆಗಳನ್ನು ರೂಪಿಸುವುದೇ ನಮ್ಮೆಲ್ಲರ ಉದ್ದೇಶವಾಗಿರಬೇಕು ಎಂದರು.ಶ್ರೀಹರಿ ಮಾತನಾಡಿ, ನಮ್ಮ ಸಂಘಟನೆ ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದೆ. ಸದಸ್ಯರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಸಂಘಟನೆಯನ್ನು ಮುಂದುವರಿಸಬೇಕು ಎಂದು ತಿಳಿಸಿದರು.

ಸೀತಾರಾಮ ಶೆಟ್ಟಿ ಅವರು ಮುಂದಿನ ಯೋಜನೆಗಳು ಹೇಗಿರಬೇಕು ಎಂಬ ಕುರಿತು ಸಲಹೆ ನೀಡಿದರು.ಎಲ್ಲ ಕಾರ್ಯಕರ್ತರಿಂದ ಬಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಬಿ. ಜಯರಾಮ ನೆಲ್ಲಿತ್ತಾಯ ಅವರು ಸಭೆಯ ಮುಂದೆ ಮಂಡಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ಅಭಿಪ್ರಾಯಗಳನ್ನು ನೀಡಿದ ಬೂದಪ್ಪ ಹಾಗೂ ವಾರಿಜಾ ಅವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರು ತಮ್ಮ ಪ್ರಸ್ತುತ ಜವಾಬ್ದಾರಿ, ಉದ್ಯೋಗ ಹಾಗೂ ಯೋಜನೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು. ಮುಂದಿನ ಸಂಘಟನಾ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು 22 ಮಂದಿಯ ಉಪಸಮಿತಿಯನ್ನು ರಚಿಸಲಾಯಿತು.ಗಂಗಾಧರ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುರೇಶ್ ಸಾಲಿಯಾನ್ ಪ್ರಾರ್ಥಿಸಿದರು. ನಾಗೇಶ್ ಉಜಿರೆ ಸ್ವಾಗತಿಸಿದರು. ಉಮೇಶ್ ಜಿ. ಎಂ. ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಕೊನೆಯಲ್ಲಿ ಯೋಜನೆಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಹಿರಿಯರಿಗೆ ಸಂತಾಪ ಸೂಚಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಸೇರಿದಂತೆ ವಿವಿಧೆಡೆಗಳಿಂದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here