ಕನ್ಯಾಡಿ ಶಾಲೆಯ ‘ಬಾಲವನ’ಕ್ಕೆ ಯುವ ಫ್ರೆಂಡ್ಸ್ ಕೊಡುಗೆ: 10,000 ರೂ. ಮೌಲ್ಯದ ಆಟದ ಸಾಮಗ್ರಿ ಹಸ್ತಾಂತರ

0

ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-2 ಧರ್ಮಸ್ಥಳ ಶಾಲೆಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟವಾದ “ಯುವ ಫ್ರೆಂಡ್ಸ್ ಕನ್ಯಾಡಿ” ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಮಾಜಮುಖಿ ನೆರವು ನೀಡಲಾಗಿದೆ.​

ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ ‘ಶ್ರೀ ಶಾರದಾಂಭ ಟ್ರೋಫಿ 2K26’ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿಕೆ ಬಂದ ಮೊತ್ತದಲ್ಲಿ ₹10,000/- ಗಳನ್ನು ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ “ಬಾಲವನ”ದಲ್ಲಿ ಮಕ್ಕಳ ಮನರಂಜನೆಗಾಗಿ ಅಗತ್ಯವಿರುವ ಹೊರಾಂಗಣ ಆಟದ ಸಾಮಗ್ರಿಗಳನ್ನು ಅಳವಡಿಸಲು ನೀಡಲಾಗಿದೆ.​

26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಯುವ ಫ್ರೆಂಡ್ಸ್ ಕನ್ಯಾಡಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಜೊತೆಗೂಡಿ ಈ ಧನಸಹಾಯದ ಮೊತ್ತವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್. ಇವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ​

ಮಕ್ಕಳ ಮುಖದಲ್ಲಿ ನಗು ಮೂಡಿಸುವ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ನೆರವಾಗುವ ಸದುದ್ದೇಶದಿಂದ ಯುವ ಫ್ರೆಂಡ್ಸ್ ಕನ್ಯಾಡಿ ತಂಡ ಕೈಗೊಂಡಿರುವ ಈ ಪ್ರಶಂಸನೀಯ ಕಾರ್ಯಕ್ಕೆ ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿ ವೃಂದದವರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಇಂತಹ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಗಳು ಇವರ ತಂಡದಿಂದ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಲಾಗಿದೆ.

LEAVE A REPLY

Please enter your comment!
Please enter your name here