ಪುದುವೆಟ್ಟು: ಮಲ್ಲಿಗೆ, ತರಕಾರಿ ಕೃಷಿ ಕುರಿತು ರೈತ ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಕೃಷಿ ಇಲಾಖೆ ಬೆಳ್ತಂಗಡಿ, ಓಂ ಶಕ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಪುದುವೆಟ್ಟು ಹಾಗೂ ಪುದುವೆಟ್ಟು ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಅ. 12ರಂದು ಒಂದು ದಿನದ ರೈತ ತರಬೇತಿ ಕಾರ್ಯಾಗಾರ ನಡೆಯಿತು.ವೇದಿಕೆಯಲ್ಲಿದ್ದ ಗಣ್ಯರು ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೃಷಿ ವ್ಯವಸ್ಥಾಪಕ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಲ್ಲಿಗೆ ಹಾಗೂ ತರಕಾರಿ ಕೃಷಿ ಉತ್ತಮ ಆದಾಯ ತಂದುಕೊಡುವ ಲಾಭದಾಯಕ ಉದ್ಯಮಗಳಾಗಿವೆ. ರೈತರು ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಇದೇ ವೇಳೆ ಕೃಷಿ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ವಲಯ ಮೇಲ್ವಿಚಾರಕಿ ವೀಣಾಶ್ರೀ ಅವರು ಸಂಜೀವಿನಿ ಯೋಜನೆಯಡಿ ಸ್ವಉದ್ಯೋಗ ಕೈಗೊಳ್ಳಲು ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು. ಒಕ್ಕೂಟದ ಅಧ್ಯಕ್ಷರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಗತಿಪರ ಕೃಷಿಕ ಹಾಗೂ ತರಬೇತುದಾರ ಪ್ರಭಾಕರ್ ಮಯ್ಯ ಮಾತನಾಡಿ, ಕಡಿಮೆ ಬಂಡವಾಳ ಹಾಗೂ ಸೀಮಿತ ಜಾಗದಲ್ಲಿ ಮಲ್ಲಿಗೆ ಮತ್ತು ತರಕಾರಿ ಕೃಷಿ ಕೈಗೊಂಡು ಉತ್ತಮ ಆದಾಯ ಗಳಿಸಬಹುದು ಎಂದರು.

ಕೃಷಿಗೆ ಅಗತ್ಯವಿರುವ ಪರಿಕರಗಳು, ಸ್ಥಳದ ಆಯ್ಕೆ, ನಿರ್ವಹಣೆ, ಆರೈಕೆ, ಕೀಟನಾಶಕ ಬಳಕೆ ಹಾಗೂ ಗೊಬ್ಬರ ತಯಾರಿಕೆ ಕುರಿತು ಸವಿಸ್ತಾರವಾಗಿ ತರಬೇತಿ ನೀಡಿದರು.ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳ ಸದಸ್ಯರು ಮತ್ತು ರೈತರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ಸಂಜೀವಿನಿ ಸದಸ್ಯೆ ಪ್ರಸಾದಿತಾ ಪ್ರಾರ್ಥಿಸಿದರು. ಒಕ್ಕೂಟದ ಕಾರ್ಯದರ್ಶಿ ಸ್ವಾಗತಿಸಿದರು. ಮುಖ್ಯ ಪುಸ್ತಕ ಬರಹಗಾರ್ತಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಪವಿತ್ರ ವಂದಿಸಿದರು.

LEAVE A REPLY

Please enter your comment!
Please enter your name here