






ಕೊಲ್ಲಿ: ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದಲ್ಲಿ ಈ ಬಾರಿಯ ನವರಾತ್ರಿ-ದಸರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.ದೇವಸ್ಥಾನದಲ್ಲಿ ಅ.11ರಿಂದ ಅ.21 ರ ತನಕ 10 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಮಾರ್ಗದರ್ಶನದಲ್ಲಿ ಜರುಗಲಿವೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ದಾಸಪ್ಪ ಗೌಡ ಕಾಂಜಾನು ಮತ್ತು ಗೌರವಾಧ್ಯಕ್ಷ ಕೆ. ಸತೀಶ್ ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿದಿನ ವಿಶೇಷ ಕಾರ್ಯಕ್ರಮಗಳು: ಹಬ್ಬದ 10 ದಿನಗಳಕಾಲ ಪ್ರತಿದಿನ ಬೆಳಿಗ್ಗೆಯಿಂದ ರಂಗಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ವೇಳೆ ತಾಲೂಕಿನ ವಿವಿಧ ಪ್ರಸಿದ್ದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಈ ಬಾರಿಯ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಅ.18 ರಂದು ಶನಿವಾರ ಪೂರ್ವಾಹ್ನ ಗಂಟೆ 8:30ರಿಂದ ಶ್ರೀದೇವಿಯ ಪ್ರೀತ್ಯರ್ಥವಾಗಿ ದೇವಳದ ವತಿಯಿಂದ ವಿಶೇಷ ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿದೆ.


ಈ ಹೋಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ. ಉತ್ಸವದ ಸಮಾರೋಪ ದಿನವಾದ ಅ.21 ರಂದು ಮಂಗಳವಾರ ರಾತ್ರಿ 8:00 ಗಂಟೆಯಿಂದ ಸಾಂಪ್ರದಾಯಿಕ ಜಡೆ ಕೋಲಾಟ ನಡೆಯಲಿದ್ದು, ನಂತರ ರಾತ್ರಿ 9:30ರಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟವು ಜರುಗಲಿದೆ. ಅ.20ರಂದು ಸಂಜೆ 7ಕ್ಕೆ ಮೆಲೋಡಿಸ್ ನಾವೂರು ಇದರ ಕಲಾವಿದರಿಂದ ರಸಿಕರ ಸಂಗಮ ಕಾರ್ಯಕ್ರಮ, ರಾತ್ರಿ 9:30ಕ್ಕೆ ಕಲ್ಕುಡ – ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.









