






ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆಯ ವರ್ತಕರು ಮತ್ತು ವರ್ತಕರ ಕುಟುಂಬದವರು ಒಂದು ಕಾರ್ಯಕ್ರಮ ದಡಿಯಲ್ಲಿ ಜೊತೆಗೂಡುವ ನಿಟ್ಟಿನಲ್ಲಿ ಅ. 10ರಂದು
ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಉಜಿರೆ ವರ್ತಕರ ಕುಟುಂಬ ಮಿಲನ 2026 ನಡೆಯಿತು.
ಕಾರ್ಯಕ್ರಮವನ್ನು ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್. ವಹಿಸಿದ್ದರು. ನಂತರ ವರ್ತಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವರ್ತರ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್. ವಹಿಸಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಉಜಿರೆ ಶ್ರೀ ಧ. ಮ. ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಡಾ. ರವೀಶ್ ಪಡುಮಲೆ ದಿಕ್ಸುಸಿ ಭಾಷಣ ಮಾಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪೂರನ್ ವರ್ಮ, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಶಶಿಧರ ಪೈ ಉಜಿರೆ ಸಂಘದ ನಿಕಟ ಪೂರ್ವ ಅಧ್ಯಕ್ಷ ಅರವಿಂದ ಕಾರಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಪತ್ರಕರ್ತ ಅರವಿಂದ ಹೆಬ್ಬಾರ್ ಮುಂಡಾಜೆ, ಸಮಾಜ ಸೇವಕರಾದ ಸಚಿನ್ ಭೀಡೆ ಮುಂಡಾಜೆ , ಆಶಾ ತಿಮ್ಮಯ್ಯ ನಾಯ್ಕ ಉಜಿರೆ ಅವರನ್ನು ಸನ್ಮಾನಿಸಲಾಯಿತು.
ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ವಿಶ್ವನಾಥ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ವರ್ತಕರ ಕುಟುಂಬದ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ವಿವಿಧ ತಿಂಡಿ ತಿನಿಸುಗಳ ಮೇಳ, ಉಜಿರೆಯ ಪ್ರತಿಭಾನ್ವಿತ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು, ವ್ಯಾಪಾರಸ್ಥರು, ಅವರ ಕುಟುಂಬ ವರ್ಗದವರು ಹಾಜರಿದ್ದು ಸಹಕರಿಸಿದರು.
ಉಷಾ ಶಶಿಧರ ಶೆಟ್ಟಿ, ಪ್ರವೀತಾ ಪ್ರಭಾಕರ್, ಪ್ರತೀಕ್ಷಿತಾ ಜೈನ್, ಜೀನತ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಅಬೂಬಕ್ಕರ್ ವಂದಿಸಿದರು.









