ವೈದ್ಯರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಕೃತ್ಯ ಖಂಡನೀಯ: ಆರೋಪಿಗಳ ಬಂಧನಕ್ಕೆ SDPI ಆಗ್ರಹ

0

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ವೈದ್ಯ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಪ್ರದೀಪ್ ಎ. ನಾವೂರು ಅವರ ಆರೋಗ್ಯ ಕ್ಲಿನಿಕ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯನ್ನು SDPI ನಾವೂರು ಬ್ರಾಂಚ್ ಕಾರ್ಯದರ್ಶಿ ಸಲೀಂ ಮುರ ತೀವ್ರವಾಗಿ ಖಂಡಿಸಿದ್ದಾರೆ.

ವೈದ್ಯಕೀಯ ಸೇವೆಯ ಜೊತೆಗೆ ಆರೋಗ್ಯ ಜಾಗೃತಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ದುರುದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವುದು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ ಕೃತ್ಯವಾಗಿದೆ. ಜನರ ಆರೋಗ್ಯ ರಕ್ಷಣೆಗೆ ಸೇವೆ ಸಲ್ಲಿಸುವ ವೈದ್ಯಕೀಯ ಕೇಂದ್ರವನ್ನೇ ಗುರಿಯಾಗಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಘಟನೆಯ ಹಿಂದೆ ಯಾವುದೇ ದುರುದ್ದೇಶ ಅಥವಾ ಪೂರ್ವಯೋಜಿತ ಸಂಚು ಇದ್ದಲ್ಲಿ ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಲೀಂ ಮುರ ಆಗ್ರಹಿಸಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಹಾಗೂ ವೈದ್ಯಕೀಯ ಸೇವಾ ಕೇಂದ್ರಗಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here