ಪಣಕಜೆ ಟೋಲ್ ಗೇಟ್ ಕೈಬಿಡದಿದ್ದರೆ ತೀವ್ರ ಜನಾಂದೋಲನ: ರಶೀದ್ ಬೆಳ್ತಂಗಡಿ

0

ಬೆಳ್ತಂಗಡಿ (ಅ-08): ಮಂಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಪಣಕಜೆ ಸಮೀಪ ಟೋಲ್ ಗೇಟ್ ನಿರ್ಮಿಸುವ ಪ್ರಸ್ತಾವನೆಗೆ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

“ಬೆಳ್ತಂಗಡಿ ತಾಲೂಕಿಗೆ ಟೋಲ್ ಗೇಟ್ ಬೇಡ. ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ತಾಲೂಕಿನ ಜನರನ್ನು ಒಗ್ಗೂಡಿಸಿ ತೀವ್ರ ಜನಾಂದೋಲನ ನಡೆಸಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.

ಬಂಟ್ವಾಳ ಬ್ರಹ್ಮರಕೊಟ್ಲು ಟೋಲ್‌ಗೆ ಪರ್ಯಾಯವಾಗಿ ಪಣಕಜೆಯಲ್ಲಿ ಟೋಲ್ ಗೇಟ್ ನಿರ್ಮಿಸುವ ಪ್ರಸ್ತಾವನೆ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಬೇಕು. ಟೋಲ್ ಗೇಟ್‌ನ ಸ್ಥಳ ಆಯ್ಕೆ, ಅಗತ್ಯತೆ, ಅನುಮೋದನೆ, ಗುತ್ತಿಗೆ ಹಾಗೂ ಆರ್ಥಿಕ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪಣಕಜೆ ಟೋಲ್ ಗೇಟ್ ನಿರ್ಮಾಣದ ಹಿಂದೆ ಯಾವುದೇ ರಾಜಕೀಯ ಅಥವಾ ಆರ್ಥಿಕ ಹಿತಾಸಕ್ತಿ ಇದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳಿವೆ. ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳ ವಿರುದ್ಧ ಕಮಿಷನ್ ಅಥವಾ ಅಕ್ರಮ ಹಣಕಾಸು ವ್ಯವಹಾರದ ಆರೋಪಗಳಿದ್ದರೆ, ಅವುಗಳ ಬಗ್ಗೆ ದಾಖಲೆ ಆಧಾರಿತ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ರಶೀದ್ ಒತ್ತಾಯಿಸಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿಧಾನಗತಿ, ಅವ್ಯವಸ್ಥೆ ಹಾಗೂ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದಿರುವ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಕಾಮಗಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸದೆ ಮತ್ತೊಂದು ಟೋಲ್ ಗೇಟ್ ಮೂಲಕ ಜನರ ಮೇಲೆ ಹೊರೆ ಹೇರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.ಟೋಲ್ ಗೇಟ್ ನಿರ್ಮಾಣಕ್ಕೆ ಸಂಸದರು ಆಸಕ್ತಿ ತೋರುತ್ತಿರುವುದು ವಿಷಾದನೀಯ.

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕೇ ಹೊರತು, ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಯೋಜನೆಗಳಿಗೆ ಬೆಂಬಲ ನೀಡಬಾರದು. ಪಣಕಜೆ ಟೋಲ್ ಗೇಟ್ ವಿಚಾರದಲ್ಲಿ ಸಂಸದರ ನಿಲುವು ಹಾಗೂ ಯೋಜನೆಯ ಕುರಿತು ಅವರ ಪಾತ್ರವನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು. ಜನರ ಮೇಲೆ ಹೊರೆ ಹೇರುವ ಯಾವುದೇ ಕ್ರಮವನ್ನು ಖಂಡಿಸುತ್ತೇವೆ.

ಪಣಕಜೆ ಟೋಲ್ ಗೇಟ್ ನಿರ್ಮಾಣ ಪ್ರಸ್ತಾವನೆಯ ಕಾನೂನುಬದ್ಧತೆ, ಅನುಮೋದನಾ ಪ್ರಕ್ರಿಯೆ ಹಾಗೂ ಅಗತ್ಯತೆಯನ್ನು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಪರಿಶೀಲಿಸಬೇಕು. ಈ ಕುರಿತು ತುರ್ತು ಸಭೆ ನಡೆಸಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ; ತಾಲೂಕಿನ ಜನರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯ ವಿರುದ್ಧದ ಹೋರಾಟ. ಟೋಲ್ ಗೇಟ್ ಪ್ರಸ್ತಾವನೆಯನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ಅಗತ್ಯವಿದ್ದರೆ ತಾಲೂಕಿನಾದ್ಯಂತ ಹಂತ ಹಂತವಾಗಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ರಶೀದ್ ಬೆಳ್ತಂಗಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here