ಎಕ್ಸೆಲ್ ಗುರು ನಮನ 2026*ಸಾಮರಸ್ಯವೇ ಸಮಾಜದ ಉನ್ನತಿಗೆ ತಳಪಾಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

0

ಗುರುವಾಯನ ಕೆರೆ: “ಸಮಾಜದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಪ್ರತಿಯೊಂದು ವರ್ಗ, ಸಮುದಾಯಕ್ಕೂ ಈ ಸಮಾಜ ಆಶ್ರಯ ನೀಡಿದೆ. ಪ್ರತಿಯೊಬ್ಬರ ನಂಬಿಕೆ ಆಚರಣೆಗಳು ಬೇರೆ ಬೇರೆಯಾಗಿರುತ್ತವೆ. ಅವರವರ ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದಾಗ ಸಮಾಜದಲ್ಲಿ ಘರ್ಷಣೆಗಳು ಏರ್ಪಡುತ್ತವೆ. ಪ್ರತಿಯೊಬ್ಬರನ್ನೂ ಸಾಮರಸ್ಯದಿಂದ ನೋಡುವ ಗುಣ ನಮ್ಮದಾಗಬೇಕು. ಸಾಮರಸ್ಯವೇ ಸಮಾಜದ ಉನ್ನತಿಗೆ ಅಡಿಪಾಯವಿದ್ದಂತೆ” ಎಂದು ಎಕ್ಸೆಲ್ ಗುರುವಾಯನ ಕೆರೆಯಲ್ಲಿ ಅಕ್ಟೋಬರ್ 4 ರಂದು ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಸ್ವಾಮೀಜಿಯವರು ಮಾತನಾಡುತ್ತಾ ಎಕ್ಸೆಲ್ ವಿದ್ಯಾಸಂಸ್ಥೆಯು ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿದೆ. ಈ ವಿದ್ಯಾಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ಪರಸ್ಪರ ಗೌರವಿಸಿರಿ. ಈ ಸಮಾಜಕ್ಕೆ ಒಳ್ಳೆಯದನ್ನು ಬಯಸಿ. ನೀವು ಓದಿದ ವಿದ್ಯಾ ಸಂಸ್ಥೆಗೆ ಚಿರಋಣಿಯಾಗಿರಬೇಕೆಂದು, ಈ ಸಂಸ್ಥೆಯು ಸಾವಿರಾರು ಶಿಕ್ಷಕರನ್ನು ನಿರಂತರವಾಗಿ ಗೌರವಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಸುಮಂತ್ ಕುಮಾರ್ ಅವರ ಈ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.

ಸುಬ್ರಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸೋಮಶೇಖರ್ ನಾಯಕ್ ಇವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ನೀವೆಲ್ಲ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಅದೃಷ್ಟವೇ ಸರಿ. ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನುಮಂತ್ ಕುಮಾರ್ ಜೈನ್ ಇವರು ಉದಾರ ವ್ಯಕ್ತಿತ್ವದ ವ್ಯಕ್ತಿ. ಅವರ ಸೇವಾ ಮನೋಭಾವದಿಂದಲೇ ಈ ಶಿಕ್ಷಣ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಜಿಲ್ಲೆಯ ಯಾವುದೇ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಂತ್ ಅವರ ಕೊಡುಗೆ ಅಪಾರವಾದದ್ದು. ಈ ಸಂಸ್ಥೆಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದೀರಿ. ನನ್ನಲ್ಲಿ ಕೃತಾರ್ಥತೆ ಭಾವ ಮೂಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಗೆ ನಾನು ಚಿರಋಣಿ” ಎಂದು ಸಂತಸ ವ್ಯಕ್ತಪಡಿಸಿದರು.

ಮೂಲ್ಕಿಯ ವಿಜಯ ಕಾಲೇಜಿನ ವಿಶ್ರಾಂತ ಪಾಚಾರ್ಯರಾದ ಡಾ .ನಾರಾಯಣ ಪೂಜಾರಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಸಂತೋಷ್ ಕುಮಾರ್ ಕಾಪಿನಡ್ಕ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು. ಎಕ್ಸೆಲ್ ವಿದ್ಯಾ ಸಂಸ್ಥೆಯ ಹಿತೈಷಿಗಳಾದ ರತ್ನರಾಜ್ ಜೈನ್ ಮತ್ತು ಪತ್ರಿಕೋದ್ಯಮಿಗಳಾದ ಸಂತೋಷ್ ಕೋಟ್ಯಾನ್ ಇವರು ಈ ಕಾರ್ಯಕ್ರಮದ ಭಾಗವಾಗಿ ಸನ್ಮಾನ ಸ್ವೀಕರಿಸಿದರು.ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮ್ಮ ಎಕ್ಸೆಲ್ ಸಂಸ್ಥೆಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ . ಇಲ್ಲಿ ಓದಿದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸುವ ಮೂಲಕ ನಮ್ಮಲ್ಲಿ ಧನ್ಯತಾಭಾವ ಮೂಡಿದೆ. ಶಿಕ್ಷಕರು ಜಗತ್ತಿನ ಪ್ರಥಮ ಪೂಜ್ಯರು . ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.

ಕಾಲೇಜಿನ ಬ್ರೋಚರ್ಸ್ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ 300 ಹೆಚ್ಚು ಶಿಕ್ಷಕರನ್ನು ಗೌರವಿಸಿದ್ದು ಅತ್ಯಂತ ವಿರಳ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿತ್ತು. ಎಲ್ಲ ಶಿಕ್ಷಕರಿಗೆ ಹಾರ , ಶಾಲು, ಪೇಟ ಮತ್ತು ಸ್ಮರಣಿಕೆ,ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಮುಖ್ಯೋಪಾಧ್ಯಯರಾದ ಶಾಂತಿರಾಜ್ ಜೈನ್ ವಂದಿಸಿದರು.

ಉಪನ್ಯಾಸಕರಾದ ಪ್ರಸನ್ನ ಭೋಜ, ತಿಪ್ಪೇಸ್ವಾಮಿ, ಪ್ರಜ್ವಿತ್ ರೈ ,ಅನನ್ಯ ಜೈನ್, ವೈಷ್ಣವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಆರಂಭವನ್ನು ಒದಗಿಸಿದರು. ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ,ಡಾ. ಪ್ರಜ್ವಲ್ ,ಉಪ ಪ್ರಾಚಾರ್ಯ ರೋಹಿತ್ , ಹರೀಶ್ ಕುಮಾರ್ ಗುರುವಾಯನಕೆರೆ ಟೆಕ್ನೋ ಸ್ಕೂಲಿನ ಮುಖ್ಯ ಶಿಕ್ಷಕಿ ಸುಮಿತ್ರ, ವೇಣೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿರಾಜ್ ಜೈನ್,ವಿದ್ಯಾರ್ಥಿಗಳು ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. *

ಎಕ್ಸೆಲ್ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈಭವ: ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನ* ಗುರು ನಮನ ಕಾರ್ಯಕ್ರಮದ ಅಂಗವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.

ಎಕ್ಸೆಲ್ ಪಿಯು ಕಾಲೇಜಿನ ಸಿಬ್ಬಂದಿಯ ಜೊತೆಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಮತ್ತು ವೇಣೂರು ಶಾಲೆಗಳ ಸಿಬ್ಬಂದಿಯವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ವಿವಿಧ ನೃತ್ಯ,ಹಾಡು, ರೂಪಕ, ಭರತನಾಟ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸರ್ವರನ್ನು ರೋಮಾಂಚನಗೊಳಿಸಿದರು. ಗಿರಿಜಾ ಕಲ್ಯಾಣ ಮತ್ತು ತಾರಕಾಸುರ ವಧೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here