






ಮರೋಡಿ: ಗ್ರಾಮದ 42 ವರ್ಷ ಹಳೆಯ ಅಂಗನವಾಡಿ ಕೇಂದ್ರವನ್ನು ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರ ದಾನಿಗಳು ಒಗ್ಗೂಡಿ ನವೀಕರಿಸಿದ್ದು, ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮ ಅ.1 ರಂದು ಜರುಗಿತು.
ಕಾರ್ಯಕ್ರಮವನ್ನು ಮರೋಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಯೋಗಿನಿ ಉದ್ಘಾಟಿಸಿದರು. ತಾವು ಕಲಿತ ಮೊದಲ ಶಾಲೆಯನ್ನು ನೆನಪಿಸಿಕೊಂಡು ಹೊಸ ರೂಪ ನೀಡಿರುವುದು ಶ್ಲಾಘನೀಯ. ಅಂಗನವಾಡಿ ಅಭಿವೃದ್ಧಿಗೆ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.ನಾರಾವಿ ವಲಯ ಮೇಲ್ವಿಚಾರಕಿ ಕಾತ್ಯಾಯಿನಿ ಅಂಗನವಾಡಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಕೊಡುಗೆಯನ್ನು ಶ್ಲಾಘಿಸಿದರು.


ಹಿರಿಯ ಆರೋಗ್ಯ ಸಹಾಯಕಿ ಮುಮ್ತಾಜ್ ಆರೋಗ್ಯ ಮಾಹಿತಿ ನೀಡಿದರು.ಕುಕ್ರಬೆಟ್ಟು ಶಾಲಾ ಮುಖ್ಯೋಪಾಧ್ಯಾಯಿನಿ ಸುಫಲಾ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಶುಭರಾಜ್ ಹೆಗ್ಡೆ ಶುಭ ಹಾರೈಸಿದರು.ಅಂಗನವಾಡಿ ಕಾರ್ಯಕರ್ತೆ ದಿವ್ಯಾ ಅವರು ಕೇಂದ್ರಕ್ಕೆ ಕಂಪೌಂಡ್, ಹೊರ ಜಗಲಿಗೆ ನೆಟ್ ಅಳವಡಿಕೆ ಹಾಗೂ ನವೀಕೃತ ಆಟದ ಮೈದಾನದ ಬೇಡಿಕೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿ ಶಶಿಕಲಾ, ಸೌಮ್ಯ ಬಾಲವಿಕಾಸ ಸಮಿತಿ ಅಧ್ಯಕ್ಷೆ, ಊರ ಹಿರಿಯರು, ಪೋಷಕರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.









