ಸೌಜನ್ಯ ಪ್ರಕರಣದ ಮರು ತನಿಖೆಗೆ ಆದೇಶ: 14 ವರ್ಷದ ನಂತರ ನ್ಯಾಯದ ಭರವಸೆ: ಅ.10 ರಂದು 5 ಕಿ.ಮೀ ನ್ಯಾಯದ ನಡಿಗೆ, ಸಮಾವೇಶ- ತಿಮರೋಡಿ

0

ಬೆಳ್ತಂಗಡಿ:ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ-ಕೊಲೆ ನಡೆದು 14 ವರ್ಷಗಳಾಗಿದ್ದು, ನಿರಂತರ ಹೋರಾಟದ ಫಲಶ್ರುತಿಯೆಂಬಂತೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10 ರಂದು ನ್ಯಾಯದ ನಡಿಗೆ ಮೂಲಕ ಉಜಿರೆಯಿಂದ ಬೆಳ್ತಂಗಡಿವರೆಗೆ 5 ಕಿ.ಮೀ ಕಾಲ್ನಡಿಗೆ ಜಾಥಾ ಹಾಗೂ ಅಭಿನಂದನಾ ಸಮಾರಂಭ ನಡೆಸಿ ಪ್ರಕರಣ ಸಂಬಂಧ ಬೆಂಬಲಿಸಿದ ವಕೀಲರು,ಹೋರಾಟಗಾರರನ್ನು ಅಭಿನಂದಿಸಲಾಗುವುದು ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೆ. 29 ರಂದು ತಿಮರೋಡಿ ಮನೆಯಲ್ಲಿ ನಡೆದ ಪತ್ರಿಕೆ ಗೋಷ್ಠಿಯಲ್ಲಿ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 10ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಯ ನಡೆ ಅಭಿನಂದನಾ ಸಭೆ ನಡೆಯಲಿದ್ದು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಅಂದು ತನಿಖೆ ಮಾಡಿದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ತನಿಖೆಯನ್ನು ಯಾರೇ ಮಾಡಲಿ,ನ್ಯಾಯಯುತವಾಗಿ ಮಾಡಲಿ ಅನ್ನುವುದೇ ನಮ್ಮ ಆಶಯ. ಪೊಲೀಸ್ ಕಾನ್‌ಸ್ಟೇಬಲ್ ನೇತೃತ್ವದ ತಂಡ ಬೇಕಾದರೂ ತನಿಖೆ ಮಾಡಲಿ,ನಮಗೆ ನ್ಯಾಯ ಸಿಗಬೇಕು,ಅತ್ಯಾಚಾರಿ ಯಾರೆಂದು ಗೊತ್ತಾಗಬೇಕೆಂದರು.

ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರದಾಯಿತ್ವ ಹೊಂದಿದ್ದಾರೆ. ಅವರು ನ್ಯಾಯಯುತವಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು. ಈ ಕೃತ್ಯದಲ್ಲಿ ಸಂತೋಷ್ ರಾವ್ ಅಲ್ಲದಿದ್ದರೆ ಇನ್ಯಾರು ಈ ಕೃತ್ಯ ಎಸಗಿರುವುದು ಎಂಬುದನ್ನು SIT ತನಿಖೆ ನಡೆಸಿ ಸೌಜನ್ಯಾಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

SIT ವರದಿ ಎಲ್ಲಿ? – ಗಿರೀಶ್ ಮಟ್ಟಣ್ಣವರ್ ಪ್ರಶ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿರೀಶ್ ಮಟ್ಟಣ್ಣವರ್, ಈ ದೇಶದ ಅತ್ಯಂತ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ ಮಾಡಿದ ತನಿಖೆಯನ್ನೇ ಪ್ರಶ್ನಿಸಿ SIT ಮೂಲಕ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು,ಬಹುದೊಡ್ಡ ಆದೇಶವಾಗಿದೆ.”ನೀವು ಯಾರ ರಕ್ಷಣೆಗಾಗಿ ತನಿಖೆ ನಡೆಸುತ್ತಿದ್ದೀರಿ” ಎಂದು CBI ಅನ್ನು ಸುಪ್ರೀಂ ಪ್ರಶ್ನಿಸಿದೆ. ಇದರಿಂದ ಯಾರನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂಬುದು ಅರ್ಥವಾಗುತ್ತದೆ. ಲೋಕಾಯುಕ್ತ ಒಂದು ಬಾರಿ, CID ಎರಡು ಬಾರಿ, ಬಳಿಕ CBI ತನಿಖೆ ನಡೆಸಿದೆ. ಅದಾಗ್ಯೂ ನಿಜವಾದ ಆರೋಪಿಗಳನ್ನು ತನಿಖೆಗೆ ಒಳಪಡಿಸಿಲ್ಲ.ಸದ್ಯ ರಚನೆಯಾಗಿರುವ SIT ತಂಡ ಯಾವುದೇ ಪ್ರಭಾವಕ್ಕೊಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಬೆದರಿಕೆಯೊಡ್ಡುವ ಘಟನೆಗಳು ಈ ಬಾರಿ ನಡೆಯಬಾರದು. ಈ ರೀತಿ ಮಾಡಿದರೆ ಅಂತಹ ಅಧಿಕಾರಿಗಳು ಅಮಾನತಾಗುವುದು ಖಂಡಿತ ಎಂದು ಎಚ್ಚರಿಸಿದರು.ನಾವು ಸಾಕ್ಷಿ ನೀಡುವುದಿಲ್ಲ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಾಕ್ಷಿ ಸಲ್ಲಿಸಲಿದ್ದೇವೆ ಎಂದರು.ಈ ಹಿಂದೆ CID ತನಿಖಾಧಿಕಾರಿಗಳು ಸಾಕ್ಷಿಗಳಿಗೆ ಬೆದರಿಕೆ ಒಡ್ಡುತ್ತಿದ್ದರು. ಈ ಬಾರಿ ಅಂತಹ ಘಟನೆ ನಡೆಯಬಾರದು. SIT ವರದಿ ಎಲ್ಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಪ್ರಶ್ನಿಸಿದ್ದಾರೆ. ನಾವು ಕೂಡ ಕೇಳುತ್ತಿದ್ದೇವೆ.ಬಂಗ್ಲೆ ಗುಡ್ಡದಲ್ಲಿ ಲಭ್ಯವಾದ ಅಸ್ಥಿಪಂಜರಗಳು ಕ್ರೂರವಾಗಿ ಕೊಲೆಯಾದವರು ಎಂದು FSL ವರದಿ ತಿಳಿಸಿದೆ. ಆದರೆ ಈ ವರದಿಗಳು ಎಲ್ಲೂ ಇಲ್ಲ. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಕೊಲೆ ಪ್ರಕರಣದ ಆರೋಪಿ ನಾಪತ್ತೆ, ಲಾಡ್ಜ್‌ನಲ್ಲಿ ಬಾಯಿಗೆ ಬಟ್ಟೆ ಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನಾಪತ್ತೆ. ಇದು ನಾವು ಹೇಳುತ್ತಿಲ್ಲ, SIT ಅಧಿಕಾರಿಗಳೇ ಉಲ್ಲೇಖಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಬಾಯಿಗೆ ಕೈ ಇಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸರ್ಕಾರ ಇದನ್ನೆಲ್ಲ ಯಾಕೆ ಮುಚ್ಚಿಡುತ್ತಿದೆ? ಎಂದು ಪ್ರಶ್ನಿಸಿದರು.ಮಹಿಳೆಯರ ರಕ್ಷಣೆಗೆ ಸಹಾಯವಾಣಿ ಬೇಕು:ಸೌಜನ್ಯ ಮಾತ್ರವಲ್ಲ, ಈ ಪ್ರಕರಣದ ಹಿಂದೆ ಅನೇಕ ಘಟನೆಗಳು ನಡೆದಿವೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು. ಮಹಿಳೆಯರ ರಕ್ಷಣೆಗಾಗಿ “ಸೌಜನ್ಯ ಸಹಾಯವಾಣಿ” ಆರಂಭಿಸಬೇಕು ಎಂದು ಒತ್ತಾಯಿಸಿದರು.

ತನಿಖಾಧಿಕಾರಿ ಶಶಿಕುಮಾರ್ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವರ ಬಗ್ಗೆ ಅನೇಕ ಆರೋಪಗಳಿವೆ. ಅಂತಹ ಅಧಿಕಾರಿಯ ವಿರುದ್ಧವೇ ಒಂದು SIT ರಚಿಸಬೇಕಾಗಿದೆ ಎಂದರು.ತಾಯಿ ಕುಸುಮಾವತಿ ಚಂದಪ್ಪಗೌಡ ಮಾತನಾಡಿ, ಒಳ್ಳೆಯ ರೀತಿಯಲ್ಲಿ ತನಿಖೆಯಾಗಬೇಕು ಎಂದು ಹೇಳಿದರು.ಕಾರ್ಯಕ್ರಮವನ್ನು ಅನಿಲ್ ಅಂತರ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here