12ನೇ ‘ಮೂಲತ್ವ ವಿಶ್ವ ಪ್ರಶಸ್ತಿ 2026’ ಪ್ರದಾನ: ಸ್ಕಾಲರ್‌ಶಿಪ್ ಮಾಸ್ಟರ್ ನಾರಾಯಣ ನಾಯಕ್‌ಗೆ ಗೌರವ

0

ಮಂಗಳೂರು: ಮೂಲತ್ವ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ನೀಡಲಾಗುವ 12ನೇ ‘ಮೂಲತ್ವ ವಿಶ್ವ ಪ್ರಶಸ್ತಿ 2026’ನ್ನು ‘ಸ್ಥಾಲರ್‌ಶಿಪ್ ಮಾಸ್ಟರ್’ ಎಂದೇ ಖ್ಯಾತರಾದ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಅವರಿಗೆ ಪ್ರದಾನ ಮಾಡಲಾಯಿತು. ಮಂಗಳೂರಿನ ಬಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.​

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, 84ರ ಇಳಿವಯಸ್ಸಿನಲ್ಲಿಯೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವಿದ್ಯಾರ್ಥಿ ವೇತನ ತಲುಪಿಸುವ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾರಾಯಣ ನಾಯಕ್ ಅವರ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಅಲ್ಲದೆ, ಸಾವಿರಾರು ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ರಾಷ್ಟ್ರೀಯ ಮಟ್ಟದ ‘ಪದ್ಮಶ್ರೀ’ ಪ್ರಶಸ್ತಿ ಅತಿ ಶೀಘ್ರದಲ್ಲೇ ಒಲಿದುಬರಲಿ ಎಂದು ಹಾರೈಸಿದರು. ಮೂಲತ್ವ ಫೌಂಡೇಶನ್ ಟ್ರಸ್ಟ್ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂತಹ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.​

​ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣ ನಾಯಕ್ ಅವರು, ಪ್ರಶಸ್ತಿಯೊಂದಿಗೆ ಲಭಿಸಿದ ಒಂದು ಲಕ್ಷ ರೂಪಾಯಿ ನಗದಿಗೆ ತಮ್ಮ ಕಡೆಯಿಂದ ಮತ್ತೊಂದು ಲಕ್ಷ ರೂಪಾಯಿ ಸೇರಿಸಿ, ಒಟ್ಟು ಎರಡು ಲಕ್ಷ ರೂಪಾಯಿಗಳನ್ನು ಮಂಗಳೂರಿನ ಬಲ್ಮಠ ಹಾಗೂ ರಥಬೀದಿ (ಕಾರ್ ಸ್ಟ್ರೀಟ್) ಪ್ರಥಮ ದರ್ಜೆ ಕಾಲೇಜಿಗೆ ದೇಣಿಗೆಯಾಗಿ ನೀಡುವುದಾಗಿ ಪ್ರಕಟಿಸಿದರು.

“ವಿದ್ಯಾರ್ಥಿಗಳೇ ನಿಜವಾದ ಶಿಕ್ಷಕನ ಸಂಪತ್ತು ಮತ್ತು ಅಸ್ತಿ. ಸಮಾಜದಿಂದ ನಮಗೆ ಸಿಗುವುದನ್ನು ಮರಳಿ ಸಮಾಜಕ್ಕೆ ಅರ್ಪಿಸುವುದು ನಮ್ಮ ಆದ್ಯ ಕರ್ತವ್ಯ” ಎಂದು ನುಡಿದರು.​

ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್ ಮಾನವ ಸಂಪನ್ಮೂಲ ಮುಖ್ಯ ಪ್ರಧಾನ ವ್ಯವಸ್ಥಾಪಕ ಮನೋಜ್ ಕುಮಾರ್ ಎ., ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಕೆ., ಪ್ರೊ. ಜಯಕರ ಭಂಡಾರಿ ಎಂ., ಬಿಎಎಸ್‌ಎಫ್ ನಿರ್ದೇಶಕಿ ಆಶಿಮಾ ಸುಶೀಲ್‌ಚಂದ್ರ, ನಟ ಜೆ.ಪಿ. ತೂಮಿನಾಡು, ಅಕ್ಷಯ್ ಕೆ. ಪಣಿಕರ್ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ​

ಇದೇ ವೇಳೆ ಮಾದಕ ದ್ರವ್ಯ ವ್ಯಸನ ನಿಷೇಧ ಕುರಿತಾದ “ಅ್ಯಂಟಿ ಅಡಿಷನ್ ಡ್ರೈವ್” ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಮೂಲತ್ವ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಪ್ರಸ್ತಾವಿಸಿ ಸ್ವಾಗತಿಸಿದರು, ಗುಣಾವತಿ ವಂದಿಸಿದರು ಹಾಗೂ ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here