






ಇಂದಬೆಟ್ಟು: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅತ್ಯಂತ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ದಿನನಿತ್ಯ ಓಡಾಡಲು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಇಂದಬೆಟ್ಟು ಗ್ರಾಮದ ಅಗ್ಗೋಟ್ಟು, ಎರ್ಮಲ, ಬೈರೋಟ್ಟು, ಪಿಚಲಾರು ಮುಖಾಂತರ ಬಂಗಾಡಿ ಮುಖ್ಯರಸ್ತೆಗೆ ಸಂಪರ್ಕಿಸುವ 5 ಕಿ.ಮೀ ಉದ್ದದ ರಸ್ತೆ ಹಾಗೂ ಪಿಚಲಾರು ಎಂಬಲ್ಲಿಂದ ದೇಸೊಟ್ಟು, ಎರ್ಮಳದವರೆಗಿನ 4 ಕಿ.ಮೀ ರಸ್ತೆ ಸೇರಿದಂತೆ ಒಟ್ಟು 9 ಕಿ.ಮೀ ರಸ್ತೆ ಕಳೆದ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಹೊಂಡಗುಂಡಿಗಳು ಬಿದ್ದು, ಮಳೆಗಾಲದಲ್ಲಿ ಕೆಸರುಮಯವಾಗಿ ವಾಹನ ಸಂಚಾರವಿರಲಿ, ಕಾಲ್ನಡಿಗೆಯೂ ಕಷ್ಟಕರವಾಗಿದೆ.
ಈ ಭಾಗದಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ 250ಕ್ಕೂ ಹೆಚ್ಚು ಮನೆಗಳಿದ್ದು, ಶಾಲಾ ಮಕ್ಕಳು, ವೃದ್ಧರು, ಅಂಗನವಾಡಿ, ಆಸ್ಪತ್ರೆಗೆ ತೆರಳುವವರು ಪ್ರತಿನಿತ್ಯ ಈ ಹದಗೆಟ್ಟ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಕೂಡ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.


ಹಲವು ವರ್ಷಗಳಿಂದ ಮನವಿ, ಆದರೂ ಸ್ಪಂದನೆ ಇಲ್ಲ:ಈ ರಸ್ತೆಯ ದುರಸ್ತಿ ಹಾಗೂ ಅಭಿವೃದ್ಧಿಗಾಗಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ, ಕೇವಲ ಭರವಸೆ ಮಾತ್ರ ಸಿಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ:ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವ ಈ ಭಾಗದ ಗ್ರಾಮಸ್ಥರು ಇದೀಗ ತಮ್ಮ ಹಕ್ಕಿನ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ.”ಮುಂದಿನ ಚುನಾವಣೆ ಬರುವ ಮುಂಚೆ ನಮ್ಮ ಮುಖ್ಯ ಬೇಡಿಕೆಯಾದ ಈ 9 ಕಿ.ಮೀ ರಸ್ತೆಯನ್ನು ದುರಸ್ತಿ ಮಾಡಿ ಅಭಿವೃದ್ಧಿಪಡಿಸಿಕೊಟ್ಟ ನಂತರವೇ ನಾವು ನಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತೇವೆ. ಇಲ್ಲದಿದ್ದರೆ ಯಾವುದೇ ಪಕ್ಷದ ಅಭ್ಯರ್ಥಿಗಳಿಗೂ ಮತ ಹಾಕುವುದಿಲ್ಲ”* ಎಂದು ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿ, ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.









