






ಉಜಿರೆ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಉಜಿರೆ ಇವರ ಸಹಯೋಗದಲ್ಲಿ 14 ಮತ್ತು 16ರ ವಯೋಮಾನದ ಬಾಲಕ–ಬಾಲಕಿಯರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸೆ. 19ರಂದು ನಡೆಯಿತು.ಎಸ್.ಡಿ.ಎಂ. ಪದವಿ ಕಾಲೇಜಿನ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ನಟರಾಜ್ ಅವರು ದೀಪ ಬೆಳಗಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಕ್ರೀಡೆ ಎಂದರೆ ಕೇವಲ ಗೆಲುವು–ಸೋಲಿನ ಸ್ಪರ್ಧೆಯಲ್ಲ. ಅದು ಶಿಸ್ತು, ಸಮಯಪಾಲನೆ, ತಂಡದ ಮನೋಭಾವ, ನಾಯಕತ್ವ, ಸಹಕಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ. ಫುಟ್ಬಾಲ್ ವಿಶೇಷವಾಗಿ ತಂಡದ ಸಹಕಾರಕ್ಕೆ ಮಹತ್ವ ನೀಡುವ ಕ್ರೀಡೆಯಾಗಿದೆ,” ಎಂದರು.ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಪಿ.ಡಿ. ಮಾತನಾಡಿ, “ವಿದ್ಯಾರ್ಥಿಗಳು ಆಟ ಮತ್ತು ಪಾಠ ಎರಡಕ್ಕೂ ಸಮಾನ ಅವಕಾಶ ನೀಡಬೇಕು.


ಆಟದಲ್ಲಿ ಗೆಲ್ಲುವುದು ಮಾತ್ರ ಸಾಧನೆಯಲ್ಲ; ಉತ್ತಮ ಆಟಗಾರನಾಗಿ ಬೆಳೆಯುವುದೇ ನಿಜವಾದ ಸಾಧನೆ,” ಎಂದು ಹೇಳಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಟಿ. ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ದೇವಸ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಗಣಿತ ಅಧ್ಯಾಪಕ ರವೀಶ್ ಕುಮಾರ್ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು.









